ಅನುದಿನ ಕವನ-೧೧೧೯, ಹಿರಿಯ ಕವಿಯತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ನಾನೊಂದು ಮಿಂಚುಹುಳ

ನಾನೊಂದು ಮಿಂಚುಹುಳ

ನಾನೊಂದು ಮಿಂಚುಹುಳ
ಬೆನ್ನಲ್ಲಿ ಬೆಳಕನ್ನು ಕಟ್ಟಿಕೊಂಡೇ
ತಿರುಗುತ್ತೇನೆ
ಕತ್ತಲೆಯಿದ್ದ ಕಡೆಯೆಲ್ಲ  ಹಣುಕುತ್ತೇನೆ

ನನಗೆ ಗೊತ್ತು,
ನಾನಿಲ್ಲಿರುವುದು ಇನ್ನು ಕೆಲವೇ ಹೊತ್ತು
ಬೆಳಕೊಂದು ಬೆಳಕು ಸೇರುವ ಮುನ್ನ
ಇಲ್ಲೊಂದಿಷ್ಟು ಬದುಕುಗಳಿಗೆ
ಹೊಳಪು ಹಂಚಬೇಕಿದೆ

ಕತ್ತಲೆಯು ಮುತ್ತಿದಾಗೆಲ್ಲ
ನೆರಳುಗಳು ಸುತ್ತಿದಾಗೆಲ್ಲ
ನನ್ನ ಶಕ್ತಿಯ ಬಗ್ಗೆ ಅನುಮಾನವಾಗುತ್ತೆ.
ಆಗೆಲ್ಲ ಮನಸ್ಸಿಗೊಂದು ವಿಷಯವನ್ನು
ಮತ್ತೆ ಮತ್ತೆ  ಇಳಿಸಿಕೊಳ್ಳುತ್ತೇನೆ.
`ನೆನಪಿಟ್ಟುಕೋ, ಇಡೀ ವಿಶ್ವವನ್ನು
ತುಣುಕು ಸೂರ್ಯ ಬೆಳಗಿಬಿಡುತ್ತಾನೆ”

(ಎಲ್ಲರ ಬದುಕಲ್ಲಿ ಮಿಂಚು ಹುಳದಂತೆ ಸಂಚರಿಸುವವರಿಗೆ ಅರ್ಪಣೆ )

-ಎಂ ಆರ್ ಕಮಲ, ಬೆಂಗಳೂರು
—–