‘ಒಲವು’ ಎಂಬ ಕಾವ್ಯನಾಮದಿಂದ ಬರೆಯುವ ಲಕ್ಷ್ಮೀ ಸಾಗರ್, ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಹಿರಿಯ ಶುಶ್ರೂಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರೀತಿ ಸ್ನೇಹಗಳು ವ್ಯವಹಾರವಾಗುತ್ತಿರುವ ಈ ದಿನಗಳಲ್ಲಿ ಒಲವನ್ನೇ ಕವಿತೆಯಾಗಿಸುವ ಇವರ ಹಲವು ಕವಿತೆಗಳಲ್ಲಿ ‘ಅವಳು’ ಕುರಿತ ರಚಿಸಿದ ಸಾಲುಗಳನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ನ ಜನಪ್ರಿಯ ಅನುದಿನ ಕವನ ಕಾಲಂನಲ್ಲಿ ಇಂದು ಪ್ರಕಟಿಸಲಾಗಿದೆ.🍀👇
ಅವಳು…!
ಅವಳು….
ನೆನಪಾಗಿದಿದ್ದರೆ,
ಮರೆಯಬಹುದಿತ್ತು;
ಉಸಿರಾದಳು….
ಅವಳು….
ಕಣ್ಣೀರಾಗಿದಿದ್ದರೆ,
ಕಳೆದುಕೊಳ್ಳಬಹುದಿತ್ತು;
ನೆತ್ತರಾದಳು….
ಅವಳು….
ಕಣ್ಣಾಗಿದ್ದಿದ್ದರೆ,
ದೂರಾಗಬಹುದಿತ್ತು;
ಹೃದಯವಾದಳು…
ಅವಳು….
ಹೆಜ್ಜೆ ಆಗಿದಿದ್ದರೆ,
ಹೇಗೂ ನಡೆಯಬಹುದಿತ್ತು;
ನೆರಳಾದಳು…
ಅವಳು….
ಕವಿತೆಯಾಗಿದಿದ್ದರೆ,
ಅಂತರ ಕಾಯ್ದುಕೊಳ್ಳಬಹುದಿತ್ತು;
ಪ್ರೀತಿಯಾದಳು….
ಅವಳು….
ಪ್ರೀತಿಯಾಗಿದ್ದಿದ್ದರೆ,
ವಿರಹದೂರಿನಲ್ಲಿ ಬದುಕಬಹುದಿತ್ತು;
ಬದುಕಾದಳು…
ಕವಿತೆ ಹುಟ್ಟಿದ್ದು…
ಅವಳಿಗಾಗಿ ಎಂದರೆ,
ಹುಚ್ಚೆನಿಸಬಹುದು;
ಅವಳ ಪ್ರೀತಿಯ
ಹುಚ್ಚು ಹಿಡಿಸಿಕೊಂಡ
ನನಗಾಗಿ….
-ಒಲವು (ಲಕ್ಷ್ಮೀ ಸಾಗರ್), ಬೆಂಗಳೂರು