ಅನುದಿನ ಕವನ-೧೧೩೦, ಕವಿ:ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ, ಕಾವ್ಯ ಪ್ರಕಾರ: ಗಜಲ್

ಗಜಲ್

ಸಂಸಾರದ ಒಳಿತಿಗಾಗಿಯೇ ಉರುಳು ಸೇವೆ ಮಾಡುವುದ ಕಲಿತೆವು
ನೊಂದವರಿಗೆಲ್ಲ ಒಳಿತಾಗಲೆಂದು ಪ್ರಾರ್ಥಿಸುವುದ ಕಲಿಯಲೇ ಇಲ್ಲ

ನಮ್ಮ ನೋವುಗಳನ್ನೇ ದೊಡ್ಡದಾಗಿಸಿ ಹಂಚಿಕೊಳ್ಳಲು ಕಲಿತೆವು
ಪ್ರತಿದಿನವೂ ಕುದಿವವರ ನೋವುಗಳ ಅರಿಯುವುದ ಕಲಿಯಲೇ ಇಲ್ಲ

ದೇಗುಲಗಳಿಗೆಲ್ಲ ಚಿನ್ನದ ಹೊದಿಕೆಯ ಹೊದಿಸುವುದ ಕಲಿತೆವು
ನಮ್ಮ ಮನಸುಗಳಿಗೆ ಚಿನ್ನದಂತೆ ಬದುಕುವುದು ಕಲಿಸಲೇ ಇಲ್ಲ

ಮತ್ತೊಬ್ಬರ ಅಂಕುಡೊಂಕುಗಳ ಹುಡುಕುವುದರಲ್ಲೆ ಕಾಲ ಕಳೆದೆವು
ವಿಕಾರಗೊಂಡಿರುವ ನಮ್ಮನ್ನು ನೋಡಿಕೊಳ್ಳುವುದ ಕಲಿಯಲೇ ಇಲ್ಲ

ನೂರಾರು ಜನರಿಗೆ ಬುದ್ಧಿಮಾತುಗಳನು ಹೇಳುವುದ ಕಲಿತೆವು
ನಮ್ಮ ಬುದ್ಧಿಹೀನತೆಯ ಅರಿತುಕೊಳ್ಳುವುದ ಕಲಿಯಲೇ ಇಲ್ಲ

ಮತ್ತೊಬ್ಬರ ನಡೆ ನುಡಿಯ ಮೇಲೆ ಸವಾರಿ ಮಾಡುವುದ ಕಲಿತೆವು
ನಮ್ಮೊಳಗಿರುವ ನಮ್ಮನ್ನು ನಿಯಂತ್ರಿಸುವುದ ಕಲಿಯಲೇ ಇಲ್ಲ

ಮಾತನಾಡುತ್ತಲೇ ಹಾಡಹಗಲೇ ಸಮಯವ ಕೊಲ್ಲುವುದ ಕಲಿತೆವು
ಸಿದ್ಧ ಮೌನದಿಂದಲೇ ಮಾತನಾಡುತ್ತ ಪ್ರೀತಿಸುವುದ ಕಲಿಯಲೇ ಇಲ್ಲ


-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ
(ಹಂಪಿ ಉತ್ಸವ-೨೦೨೪ರ ಕವಿಗೋಷ್ಠಿಯಲ್ಲಿ ಓದಿದ ಗಜಲ್)
—–