ಹಂಪಿ ಉತ್ಸವ ಅಂದ್ರೆ ಊರ ಹಬ್ಬವಿದ್ದಂತೆ: ನಟ ವಿ.ರವಿಚಂದ್ರನ್ ಬಣ್ಣನೆ

 

ಹಂಪಿ(ವಿಜಯನಗರ) ಫೆ.4 : ಕುಟುಂಬದವರು ಪ್ರೀತಿಯಿಂದ ಸೇರಲು ಮನೆ ಹಬ್ಬ ಮಾಡುತ್ತೇವೆ. ಆದರೆ, ಇಡೀ ಊರ ಜನರು ಒಗ್ಗೂಡಲು ಮಾಡುವ ಹಬ್ಬ, ಊರ ಹಬ್ಬ ಅಂದ್ರೆ ಅದು ಹಂಪಿ ಉತ್ಸವ ಎಂದು ಹಿರಿಯ ಚಲನಚಿತ್ರ ನಟ ವಿ.ರವಿಚಂದ್ರನ್ ಅವರು ಹಂಪಿ ಉತ್ಸವವನ್ನು ಬಣ್ಣಿಸಿದರು.
ಹಂಪಿ ಉತ್ಸವ-2024ರ ಸಮಾರೋಪ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡಿದ್ದ ಅವರು ಕಿಕ್ಕಿರಿದು ಸೇರಿದ್ದ ಜನಸ್ತೋಮ ಉದ್ದೇಶಿಸಿ ಮಾತನಾಡಿದರು.
ಹಂಪಿ ಅಂದ್ರೆ ತಮ್ಮ ಮೈ ಝುಮ್ಮೆನ್ನುತ್ತದೆ ಎಂದು ಭಾವುಕರಾದ ಅವರು, ಹಂಪಿಯಲ್ಲಿನ ಒಂದೊಂದು ಶಿಲೆಗಳು ಇಲ್ಲಿನ ಒಂದೊಂದು ಕಥೆ ಹೇಳುತ್ತವೆ. ಇಲ್ಲಿನ ಕಲಾಶಿಲ್ಪ ಅವಿಸ್ಮರಣೀಯವಾಗಿದೆ. ಅಂತಹ ಕಲಾವಿದರ ಸೇವೆಯನ್ನು ಸ್ಮರಿಸುವ ಕಾರ್ಯವನ್ನು ಇಂತಹ ಉತ್ಸವಗಳು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಹಂಪಿ ಸುಮ್ಮನೇ ಆಗಿಲ್ಲ. ಇದಕ್ಕೆ ಅದ್ಭುತ ಇತಿಹಾಸವಿದೆ. ಹಲವರು ಸೇರಿ ನಿರ್ಮಿಸಿದ ಸಂಪತ್ತು ಇದು. ಇದನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಗೊತ್ತಿರೋದು ಪ್ರೀತಿ: ನನಗೆ ಗೊತ್ತಿರೋದು ಕೇವಲ ಪ್ರೀತಿ ಎಂದು ತಿಳಿಸಿದ ರವಿಚಂದ್ರನ್
ಅವರು, ತಾವು ನಟಿಸಿದ ಪ್ರೇಮಲೋಕ ಸಿನೇಮಾಕ್ಕೆ ಇದೀಗ 30 ವರ್ಷ ಆಯ್ತು. ಅದೇ ರೀತಿ ಹಂಪಿ ಉತ್ಸವಕ್ಕು 30 ವರ್ಷವಾಯಿತು. ಹೀಗಾಗಿ ಹಂಪಿ ಉತ್ಸವಕ್ಕು ಮತ್ತು ತಮಗು ಅವಿನಾಭಾವ ಸಂಬಂಧ ಇದೆ ಎಂದರು.
ನಿಮಗೆ ಇಷ್ಟವಾಗುವ ಸಿನೇಮಾ‌ ನಿರ್ಮಾಣ: ಸಿನೇಮಾ ಮಾಡೋದು ಬಿಟ್ಟರೆ ಬೇರೆ ಏನೂ ನನಗೆ ಗೊತ್ತಿಲ್ಲ.
ನನ್ನ ಗೆಲವು ಮತ್ತು ನನ್ನ ಸೋಲು ಜನರ ಕೈಯಲ್ಲಿದೆ ಎಂದು ಭಾವಿಸಿದ್ದೇನೆ. ನಾನು ಯಾವತ್ತೂ ಸೋತಿಲ್ಲ. ಸೋಲನ್ನು ನಾನು ಒಪ್ಪೋಲ್ಲ.
ಒಂದು ಉತ್ತಮ ಕೆಲಸಕ್ಕಾಗಿ ನಾನು ಸಾಕಷ್ಟು ಕಾಯುತ್ತೇನೆ. ಬರುವ ವರ್ಷದೊಳಗೆ
ಮತ್ತೆ ಪ್ರೇಮ ಲೋಕ ಕಟ್ಟಿ ಕೊಡ್ತೇನೆ. ಮನೆಮನೆಯಲ್ಲಿ ಹಾಡು ಕೇಳಬೇಕು. ಹಾಗೆ ಸಿನೇಮಾ‌ ಮಾಡ್ತೇನೆ
ಎಂದು ತಿಳಿಸಿದರು.
ಸಮಾರಂಭದಲ್ಲಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಶಾಸಕರಾದ ಹೆಚ್. ಆರ್. ಗವಿಯಪ್ಪ, ಜಿಲ್ಲಾಧಿಕಾರಿ ದಿವಾಕರ್ ಮತ್ತಿತರ ಗಣ್ಯರು ಇದ್ದರು.
*****