ಹಂಪಿ ಉತ್ಸವಕ್ಕೆ ಸಂಭ್ರಮದ ತೆರೆ: ಮೂರು ದಿನಗಳಲ್ಲಿ ಉತ್ಸವದಲ್ಲಿ 12 ಲಕ್ಷಕ್ಕೂ ಹೆಚ್ಚಿನ ಜನರು ಭಾಗಿ

ಹಂಪಿ(ವಿಜಯನಗರ).ಫೆ.4: ಮೂರು ದಿನಗಳ ಹಂಪಿ ಉತ್ಸವಕ್ಕೆ ಭಾನುವಾರ ಸಂಜೆ ಸಂಭ್ರಮದ ತೆರೆ ಕಂಡಿತು. ಉತ್ಸವದಲ್ಲಿ 12 ಲಕ್ಷ ಜನರು ಭಾಗಿಯಾಗಿ ಉತ್ಸವವನ್ನು ಅಭೂತಪೂರ್ವವಾಗಿ ಬೆಂಬಲಿಸಿದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು, ಮೂರು ದಿನಗಳ ಕಾಲ ನಾಡಹಬ್ಬದಂತೆ ಹಂಪಿ ಉತ್ಸವ ಜರುಗಿದೆ. ಅದ್ದೂರಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಹಂಪಿ ಉತ್ಸವಕ್ಕೆ ಯಾವುದೇ ಪಕ್ಷ ಬೇಧ ಇಲ್ಲ. ಎಲ್ಲರೂ ನಮ್ಮ ನಾಡಿನ ಉತ್ಸವ ಎಂದೇ ಪಾಲ್ಗೊಂಡಿದ್ದಾರೆ. ಈ ಹಿಂದಿನ ಎಲ್ಲಾ ಉತ್ಸವಗಳಿಂತಲೂ ಅಧಿಕ ಜನಸ್ತೋಮ ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಿದ್ದಾರೆ. ಮೂರು ದಿನದ ನಾಡಹಬ್ಬಕ್ಕೆ ಅಚ್ಚುಕಟ್ಟಾಗಿ ಪೊಲೀಸ್ ಇಲಾಖೆ ಬಂದೋಬಸ್ತ್ ಕಾರ್ಯನಿರ್ವಹಿಸಿದೆ. ಕಿರಿದಾದ ರಸ್ತೆ ಹಾಗೂ ಅಧಿಕ ವಾಹನ ದಟ್ಟಣೆಯಿಂದ ಟ್ರಾಫಿಕ್ಸ್ ಸಮಸ್ಯೆ ಉಂಟಾಗಿದೆ. ಇದು ಕೂಡ ಉತ್ಸವ ಯಶಸ್ಸಿನ ಸೂಚಕ ಎಂದರು. ಹಂಪಿಯ ತುಂಬೆಲ್ಲಾ ಹೋಟೆಲ್ ಸ್ಟಾಲ್‌ಗಳು ರಿಯಾಯಿತಿ ದರದಲ್ಲಿ ಊಟ ಒದಗಿಸಿವೆ. ಇವರ ಸೇವೆ ಆಧರಿಸಿ ಜಿಲ್ಲಾಡಳಿತದಿಂದ ಹೋಟೆಲ್ ಸ್ಟಾಲ್‌ಗಳ ಬಾಡಿಗೆ ಮನ್ನಾ ಮಾಡುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಘೋಷಿಸಿದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡಿನ ಕಲೆ, ಸಾಹಿತ್ಯ,ಸಂಸ್ಕೃತಿಯ ಮಹತ್ವ ಸಾರುವ ನಿಟ್ಟಿನಲ್ಲಿ ಹಂಪಿ ಉತ್ಸವ ಆಯೋಜಿಸಲಾಗಿದೆ. ಉತ್ಸವವನ್ನು ಇನ್ನಷ್ಟು ಅಚ್ಚುಕಟ್ಟಾಗಿ ಆಯೋಜಿಸಲು ಜನರು ನೀಡುವ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಚಿತ್ರನಟ ವಿ.ರವಿಚಂದ್ರನ್,  ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಮಾಜಿ ಸಚಿವ ಆನಂದ್ ಸಿಂಗ್, ಹಂಪಿ ಗ್ರಾ.ಪಂ. ಅಧ್ಯಕ್ಷ ರಜನಿ ಷಣ್ಮುಖ, ನೆನಪಿರಲಿ ಖ್ಯಾತಿಯ ನಟ ಪ್ರೇಮ್, ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸದಾಶಿವಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಸಂಗೀತ ಸಂಯೋಜಕ ಸಾಧು ಕೋಕಿಲ ಇದ್ದರು. ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿದರು. ವೇದಿಕೆ ಮೇಲೆ ಉತ್ಸವ ಆಯೋಜನೆಯಲ್ಲಿ ಶ್ರಮಿಸಿದ ಎಲ್ಲಾ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
—–