ಅನುದಿನ ಕವನ-೧೧೪೦, ಹಿರಿಯ ಕವಯಿತ್ರಿ:ಎಂ. ಆರ್. ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಕಣ್ಣುಗಳು ಖಾಲಿಯಾದರಷ್ಟೇ….

ಕಣ್ಣುಗಳು ಖಾಲಿಯಾದರಷ್ಟೇ….

ಕಣ್ಣಿನ ಹೊಳಪು ಕುಗ್ಗಿದೆ, ಸುತ್ತ  ಕಪ್ಪು ಗೆರೆ ಮೂಡಿದೆ
ಕಣ್ಣೊಳಗೆ  ಉಳಿದೇ ಹೋದ  ಸ್ಕ್ರೀನ್ ಶಾಟ್ ಗಳು!

ಹುಡುಕಿ, ಒಟ್ಟುಗೂಡಿಸಿ ಮಾಡಿರುವ  ಆಲ್ಬಮ್
ಎಷ್ಟೊಂದು  ಕಪ್ಪು ಪುಟಗಳು ಹರಿದು ಹೋಗಿವೆ,
ಗೆಳೆಯರ  ಜೊತೆಗಿರುವುದನ್ನು ಕತ್ತರಿಸಿ ಹಾಕಲಾಗಿದೆ
ಮನೆಗೆ ಬಂದವರು ಚಿತ್ರಗಳನ್ನೇ ಹೊತ್ತೊಯ್ದಿದ್ದಾರೆ
ಖಾಲಿ ಉಳಿದ ಫೋಟೋ ಕಾರ್ನರ್ ನಿಗೂಢ!
ಹೆಂಗಸರ ಮುಖಕ್ಕೆ ಮೀಸೆ ಬರೆದವರು ಯಾರು?

ಆಲ್ಬಮ್ ನ ಪುಟ್ಟ ಬೋಲ್ಟ್ ಮತ್ತು ನಟ್ ಕಳಚಿ
ಹಾಳೆಗಳು ಮೇಲೆದ್ದು  ಮುರಿದು ಹೋಗಿವೆ
ಮತ್ತಾವುದನ್ನೋ ಸೇರಿಸುವ  ಯತ್ನ ನಡೆದು
ಖುಷಿಯ ಸೆಳೆತಗಳೇ ಕುಗ್ಗಿ ಹೋಗಿವೆ
ಆಲ್ಬಮ್ ಕಸವಾಗುವ ದಿನ  ದೂರವಿಲ್ಲ!

2
ಕಣ್ಣೊಳಗಿನ ಸ್ಕ್ರೀನ್ ಶಾಟ್ ಗಳ ಕತೆಯೇನು?
ಹಲವು  ಬದುಕಿನ  ಪ್ರವಾಹದಲ್ಲಿ  ಕೊಚ್ಚಿ ಹೋಗಿವೆ
ಒಂದಿಷ್ಟು ನಕ್ಷತ್ರದಲ್ಲಿ ಬೆಳಕಾಗಿ ಹೊಳೆಯುತ್ತಿವೆ
ಉಳಿದದ್ದನ್ನು  ಕಿತ್ತು ಗಿಡವಾಗಿ ಊರುತ್ತಿದ್ದೇನೆ
ಕೆಲವನ್ನು ಗಾಳಿಯಲ್ಲಿ ತೇಲಿ ಬಿಟ್ಟಿದ್ದೇನೆ,

ಕಣ್ಣುಗಳು ಖಾಲಿಯಾದರಷ್ಟೇ ಮಗುವಿನ ನೋಟ!

-ಎಂ.ಆರ್. ಕಮಲ, ಬೆಂಗಳೂರು
—–