ಗುಬ್ಬಿ ಮತ್ತು ಕವಿತೆ
ಕವಿತೆಯೊಂದನ್ನು ಹೆಣೆಯುತ್ತಿದೆ ಗುಬ್ಬಿ
ಯಾರದೋ ಮನೆ ಮಾಡು
ಎಲ್ಲೋ ಹೊತ್ತು ತಂದ ನಾರಿನ ಸೂಡು
ಅದೆಷ್ಟು ಜತನ ಬದುಕು ಕಟ್ಟುವುದು
ಕವಿತೆಯೊಂದನು ಕಟ್ಟುತ್ತಿದೆ ಗುಬ್ಬಿ
ಮಕ್ಕಳು ಮರಿ ಆಡಿ ಬೆಳೆಯಲು
ಗುಡ್ಡ ಗವಿ ಹಾಡಿ ಬೆಳಗಲು
ಅದೆಷ್ಟು ದಾವತಿ ರೂಪಕಗಳನ್ನು ಹೆಕ್ಕಿ ತರುವುದು
ಕವಿತೆಯೊಂದನ್ನು ಚಂದ ಬದುಕಿದೆ ಗುಬ್ಬಿ
ಜೀವಕೆ ಜೀವ ಗುಟುಕು ಕೊಟ್ಟು
ಮಂದಿರ ಮಿನಾರುಗಳ ಗೊಡವೆಯ ಬಿಟ್ಟು
ಅದೆಷ್ಟು ಸಲೀಸು ರೆಕ್ಕೆ ಬಿಚ್ಚಿ ಹಾರುವುದು
ಕವಿತೆಯೊಂದು ಕಟ್ಟಿದ ಮೇಲೆ ನಿರ್ಮೋಹಿ ಗುಬ್ಬಿ
ಯಾವಾಗ ಬೇಕಾದರೂ ಮರ ಉರುಳಬಹುದು
ಮನೆಯನು ಫರ್ಮಾನಿನ ಬುಲ್ಡೋಜರ್ ಕೆಡವಬಹುದು
ಅದೆಷ್ಟು ನಿರ್ಲಿಪ್ತ ನಾಳೆಯ ಕನಸು ಮರೆಯುವುದು
-ವಿಶಾಲ್ ಮ್ಯಾಸರ್, ಹೊಸಪೇಟೆ
—–