ಅನುದಿನ ಕವನ-೧೧೪೬, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ, ಕವನದ ಶೀರ್ಷಿಕೆ:ನಾನಿನ್ನ ಮರೆತಿಲ್ಲ

ನಾನಿನ್ನ ಮರೆತಿಲ್ಲ

ನಮ್ಮೂರ ಗುಡ್ಡದ ಕಲ್ಲು ಹೇಳಿತು
ಸಣ್ಣವನಿದ್ದಾಗ ನನ್ನದೆಯ
ಮೇಲೆ ಓಡಾಡಿದವನು ನೀನು
ನಿನ್ನ ನಾ ಮರೆತಿಲ್ಲ ಕಂದಾ…
ಆ ಪುಟ್ಟ ಹೆಜ್ಜೆಯ ಗುರುತು
ನಾನಿನ್ನೂ ಕಾಪಿಟ್ಟಿದ್ದೇನೆ…

ನಮ್ಮೂರ ಮಣ್ಣು ಮಾತಾಡಿತು
ಪುಟ್ಟಾ ನನ್ನ ಮೈ ಮುಖ
ಸವರಿ ಆಡಿದ ಮುದ್ದು ಮಗುವೇ
ನಿನ್ನ ನಾ ಮರೆತಿಲ್ಲ ಕಂದಾ..
ಆ ಮೃದು ಸ್ಪರ್ಶದ ಹರ್ಷವ
ನನ್ನ ತಿಜೂರಿಯಲ್ಲಿರಿಸಿರುವೆ…

ನಮ್ಮೂರ ಕೆರೆ ನೀರು ನಿವೇದಿಸಿತು
ನನ್ನನು ಬೊಗಸೆಯಲಿ ಬಂಧಿಸಿ
ಹೂದುಟಿಯಲಿ ಸವಿದ ಕಂದಾ..
ನಿನ್ನ ಅಂಗೈ ಗೆರೆಗಳ ಗುರುತು
ನನ್ನಂಗಳದಿ ರಂಗೋಲಿಯಾಗಿವೆ
ಅದೇಗೆ ಮರೆಯಲಿ ನಿನ್ನಾ…

ನಮ್ಮೂರು ಶಾಲೆ ಹೇಳಿತು
ನೀ ನನ್ನ ಮಡಿಲಿಲಿ ಮಲಗಿ
ಜ್ಞಾನಾಮೃತವ ಕುಡಿದು ಬೆಳೆದ
ನನ್ನ ಮುದ್ದು ಮಗ ನೀನಲ್ಲವೇ..
ನೀನೆಲ್ಲಿದ್ದರೂ ಹೇಗಿದ್ದರೂ
ನನ್ನ ಕರುಣೆಯ ಕುವರ ನೀನು


-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ
—–