ಎಂದಿಗೂ ಮುಗಿಯದ ಕವಿತೆ
ಮುಗಿದ ಕೈಗಳಲ್ಲಿ
ಬೇಡುವ ಭಾವ ಅಡಗಿದೆ
ಹೊಗಳುವ ಮಾತುಗಳಲ್ಲಿ
ಯಾವುದೋ ಸ್ವಾರ್ಥ ಇಣುಕಿದೆ
ದಾರಿ ತೋರುವ ಬೆಳಕೂ
ಕತ್ತಲೆ ಕರುಣಿಸಲು ಹೊಂಚು ಹಾಕಿದೆ
ಆಸರೆಗೆ ಹಿಡಿದ ಊರುಗೋಲೂ
ಬೀಳಿಸಿ ಮೋಜು ನೋಡಲು ಕಾದಿದೆ
ಹಚ್ಚಿಟ್ಟ ಹಣತೆಗಳೂ ಬೆಳಗಿದಂತೆ ಕಂಡರೂ
ಬೆಂಕಿ ಉಗುಳುವುದ ಕಂಡಿದ್ದೇನೆ
ಕಲಿಸಿಕೊಟ್ಟ ನಾಲ್ಕು ಅಕ್ಷರಗಳು
ತಿರುಗುಬಾಣವಾಗಿ ಎದೆಗೇ ಚುಚ್ಚಿದ್ದನ್ನು ಮರೆಯಲಾಗುತ್ತಿಲ್ಲ
ಘನತೆ ಗೌರವಗಳೆಲ್ಲ
ದುಡ್ಡಿಗೆ ಅಡ್ಡಬಿದ್ದು ಮಂಡಿಯೂರಿರುವಾಗ
ಪ್ರಾಮಾಣಿಕತೆ ಮರೆಯಲ್ಲಿ
ಕೆನ್ನೆ ತೋಯಿಸಿಕೊಂಡು ಬಿಕ್ಕಿದೆ
ಆಚಾರ ಹೇಳುವ ಬಾಯಿಗಳೆಲ್ಲ
ನೀಚತನಕಿಳಿದಿವೆ…
ಹಸಿವ ತಣಿಸುವ ನೆಪಗಳೆಲ್ಲ
ಕೊಬ್ಬಿ ಅಹಮ್ಮಲ್ಲೇ ಮೆರೆದಿವೆ
ಕಂಡದ್ದನ್ನು ಹೇಳಬೇಕೆಂದರೆ ಗಂಟಲಿಗೆ ಲಕ್ಷ್ಮಣರೇಖೆ
ನಿಯತ್ತಿಗೆ ಮರ್ಯಾದೆಗೆಟ್ಟವರ ಕಾವಲು
ಇದು ಎಂದಿಗೂ ಮುಗಿಯದ ಕವಿತೆ….
ಎಷ್ಟು ಬೆಳಗಿದರೂ ಕತ್ತಲೆ ಕಳೆಯದ ಹಣತೆ!
-ನಾಗೇಶ್ ಜೆ. ನಾಯಕ, ಸವದತ್ತಿ
—–