ಅನುದಿನ ಕವನ-೧೧೪೮, ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಮಾತು ಮರೆತಂತಿದೆ

ಮಾತು ಮರೆತಂತಿದೆ

ಎಷ್ಟೊಂದು ಉಂಟಲ್ಲ ಹೇಳಲು
ಆದರ್ಯಾಕೋ ಮಾತು ಮರೆತಂತಿದೆ
ಶಬ್ದಗಳಡಗಿ ಎಲ್ಲಾ ಖಾಲಿ ಖಾಲಿ
ಬಹುಶಃ ಮಾತು ಮುನಿದಂತಿದೆ

ಮೆಲ್ಲಗೆ ಧ್ವನಿ ಎತ್ತಿದರೂ ಹೇಳಲು
ಧೂಳು ಧೂಸರು ಗುಪ್ಪೆ ಗುಪ್ಪೆ ಮೆತ್ತಿ
ಸ್ವರಕೊಂದು ಅಡ್ಡ ಗೋಡೆಯಾಗಿ
ದಿಕ್ಕು ತಪ್ಪಿ ಮಾತು ಮರೆತಂತಿದೆ

ಆ  ಧೂಳು ಧೂಸರು ಮೇಲೆ ಹಾರಿ
ನೆಟ್ಟಗೆ ಕಣ್ಣೊಳಗೆ ಸ್ಥಳಬಿಡದೆ ಸೇರಿ
ಏನೂ ಕಾಣದಂತೆ ನೋಟ ಮಬ್ಬಾಗಿ
ತೋಚದೆ ಕಣ್ಣೂಮಾತು ಮರೆತಂತಿದೆ

ಅಡಗಿದ ಸ್ವರ ಮಬ್ಬು ನೋಟ ದಾಟಿ
ತಲೆ ತುಂಬ ಈಗ ಆ ಧೂಳು ಧೂಸರು
ಜಿಡ್ಡುಗಟ್ಟಿದ ತಲೆ ಏನೋ ಹೇಳಹೊರಟರೂ
ಗೋಜಲಾಗಿ ಮಾತು ಮರೆತಂತಿದೆ

ಎದೆ ಯಾಕೋ ಭಾರ ತಳಮಳ
ಭಾವಗಳ ಒತ್ತಡಕ್ಕೆ ಮಿಸುಕಾಟಕೆ
ಇಳುಹಿ ಹಗುರಾಗಲು ತಾವೇ ಇಲ್ಲ
ಮೌನ ರಾಜ್ಯದಲಿ ಮಾತು ಮರೆತಂತಿದೆ

ಉಂಟೆ  ಅಚ್ಚರಿ ಬೇಸರ ಮಾತಿಗೂ
ಇಹುದೆ ಅದಕೂ ಮುನಿಸು ಸೆಡವು
ಒಟ್ಟಿಟ್ಟ ಗುಡ್ಡೆ ಕರಗಿ ನಿರ್ಧಾಸ್ತ ಆಗಲು
ಮುನಿಸು ಸರಿದು ಮಾತು ಮರಳಲು
ಕಾಯುವುದೊಂದೇ  ದಾರಿ ಈಗ
ಅದೊಂದೇ  ದಾರಿ ಈಗ

-ಸರೋಜಿನಿ ಪಡಸಲಗಿ
ಬೆಂಗಳೂರು
—–