ಇದು ಬೆಳಕಿನ ಲಹರಿ. ಬದುಕಿನ ನಿತ್ಯ ಸತ್ಯಗಳ ಭಾವಝರಿ. ಇದು ನಮ್ಮ ನಿಮ್ಮದೇ ಜೀವ-ಜೀವನಗಳ ಅನುದಿನದ ಅನುಕ್ಷಣದ ವಾಸ್ತವ ಸಂಗತಿಗಳ ಕವಿತೆ. ಬಾಳಿನ ಹಾದಿ ಬೆಳಗುತ್ತಾ ಆಂತರ್ಯವನ್ನು ಬೆಳಕಾಗಿಸುವ ಅಕ್ಷರ ಪ್ರಣತೆ. ಇಲ್ಲಿ ಪ್ರತಿ ಚರಣದಲ್ಲೂ ಸತ್ಯ ಸತ್ವಗಳ ಅನಾವರಣವಿದೆ. ಬದುಕಿನ ಬೆಳಕಿನ ತತ್ವಗಳ ರಿಂಗಣವಿದೆ. ಎನ್ನುತ್ತಾರೆ ಕವಿ ಎ.ಎನ್.ರಮೇಶ್.ಗುಬ್ಬಿ ಅವರು!👇🍀
ಬೆಳಕಿನ ಲಹರಿ..!
ವಿಶ್ವಾಸಘಾತಕರ ನಡುವೆ
ನಂಬಿಕೆಯ ನಿರೀಕ್ಷೆಯೇಕೆ?
ಪಕ್ಷಪಾತಿಗಳ ನಡುವೆ
ಪಾರದರ್ಶಕತೆಯ ಕನಸೇಕೆ?
ಅಕ್ಕರೆ ಅಂತಃಕರಣವಿಲ್ಲದೆಡೆ
ಆಪ್ತತೆಯ ಅಪೇಕ್ಷೆಯೇಕೆ?
ಕ್ರೌರ್ಯ ಮಾತ್ಸರ್ಯಗಳೆಡೆ
ಮಮಕಾರದ ಮಾತೇಕೆ?
ನೀತಿ ನ್ಯಾಯವಿಲ್ಲದಿರುವೆಡೆ
ನಿಜಾಯತಿಯ ಮನಸೇಕೆ?
ಬಂಧ ಭಾವಗಳಿಲ್ಲದಿರುವೆಡೆ
ಬೆಸುಗೆಯ ನೆನಪೇಕೆ.?
ದಯೆ ಕಾರುಣ್ಯಗಳಿಲ್ಲದೆಡೆ
ಅನುಕಂಪದ ಬಯಕೆಯೇಕೆ?
ಸಮಯಸಾಧಕರ ನಡುವೆ
ತ್ಯಾಗ ಅರ್ಪಣೆ ನಡೆಯೇಕೆ?
ಹಳಿವ ತುಳಿವರ ನಡುವೆ
ಆಸರೆಯ ಹಂಬಲವೇಕೆ?
ಆಚಾರವಿಲ್ಲದವರ ನಡುವೆ
ಸತ್ಯವಿಚಾರಗಳ ಬೆಳಕೇಕೆ?
ಪ್ರೀತಿಯಿಲ್ಲದವರ ನಡುವೆ
ಗೆಳೆಯ ಪರದೇಸಿ ಬದುಕೇಕೆ?
-ಎ.ಎನ್.ರಮೇಶ್, ಗುಬ್ಬಿ.
—–