ಕೌದಿ ಹೊಲಿಯುವುದೆಂದರೆ……!
ಕೌದಿ ಹೊಲಿಯುವುದೆಂದರೆ ಬದುಕು ಭವಣೆಯ
ಕೊಳದಲ್ಲಿ ಸದಾ ನೆನೆ ನೆನೆದು ಮಾಸಿದ
ಹಳೆಯ ಸೀರೆಗಳನ್ನು ಹೊಸ ದಾರದೊಂದಿಗೆ
ಎಳೆ ಎಳೆಯಾಗಿ ಒಪ್ಪವಾಗಿ ಜೋಡಿಸಿ,
ಸಂಜೆ ಹರಡಿದ ನಸುಗೆಂಪು ಆಗಸ ವನು
ಎದೆಯ ಪಡಸಾಲೆಯಲ್ಲಿ ಹರಡುವುದು.
ನಡುರಾತ್ರಿ ಗುಯ್ಯ್ ಗುಡುವ ಚಳಿಗೆ
ಮೈ ನಡುಗಿಸುತ್ತಾ ಕೀಟವೊಂದು ತನ್ನ ಸುತ್ತ
ಗೂಡು ಕಟ್ಟಿದಂತೆ ಬೆಚ್ಚಗೆ ಕನಸೊಂದನ್ನು ತಬ್ಬಿಕೊಂಡು
ಬಿಸಿಲ ಕಾವು ಎದೆಗೆ ತಾಗುವ ತನಕ ಸಖಿಯಾಗಿ
ಮೈಯ ರಮಿಸುವುದು.
ಅಲ್ಲಲ್ಲಿ ಚಿತ್ತಾರ ಹೊಲೆಯುವವಳ ವಯ್ಯಾರದ
ಕೈ ಚಳಕ.ನಾಲ್ಕು ಅಂಚಿಗೆ ಹೊಲಿಗೆ ಕಾಯುವ
ನಾಲ್ಕು ದಿಕ್ಕಿಗೂ ಮೂರು ಕೋನ ಹೇಗೆ
ಹೇಳಲಿ ಹೇಳು?ನಿನ್ನ ಪೂರ್ವ ಜನ್ಮದ ಕಥೆಯ.
ಹಿಡೀ ಜಗತ್ತನ್ನು ಬೆಚ್ಚಗಿಡುವ ತವಕದಲ್ಲಿ ನೀ
ತಣ್ಣಗಾಗುವುದಾ ನಾನೆಂದೂ ಗಮನಿಸುವುದಿಲ್ಲ..
-ಪಿ.ಎಂ.ಕೊಟ್ರಸ್ವಾಮಿ.ಹೂವಿನಹಡಗಲಿ
ಕೊಟ್ರಸ್ವಾಮಿಯವರೇ, ನಿಮ್ಮ ಸರಳ ವರ್ಣನಾಯುಕ್ತ ಮಾರ್ಮಿಕ ಕವನವನ್ನು ಓದಿ ನನ್ನ ತಾಯಿಯ ನೆನಪಾಗಿ ಕಣ್ಣೀರ ಧಾರೆ. ನನಗೀಗ 78. ಇಂದಿನ ತಲೆಮಾರಿನವರಾದವರು ಋತು ಸಮಯದ ನಾಲ್ಕು ದಿನ ಸುಮ್ಮನೆ ಕೂಡದೆ ಹಳೆಯ ಸೀರೆಗಳನ್ನು ಕೌದಿ ಮಾಡಿ. ಮಾಡಿ ಪೇರಿಡಿಸುತ್ತಿದ್ದರು. ಧಾರವಾಡದ ಚಳಿಯಲ್ಲಿ ಹೊದ್ದು ನಿದ್ರಿಸಿದ ಶಾಲಾಬಾಲಕ ನಾನು. ನಿಮ್ಮ ಸಾಲುಗಳು
“ಕೌದಿ ಹೊಲಿಯುವುದೆಂದರೆ ಬದುಕು ಭವಣೆಯ
ಕೊಳದಲ್ಲಿ ಸದಾ ನೆನೆ ನೆನೆದು ಮಾಸಿದ
ಹಳೆಯ ಸೀರೆಗಳನ್ನು ಹೊಸ ದಾರದೊಂದಿಗೆ…” ಅಕ್ಷರ ಸಹ ನಿಜ. ನನ್ನ ಪ್ರಥಮ ಕವನದಲ್ಲೂ ಅದನ್ನೇ ನೆನೆದಿದ್ದೆ. ‘ನಿನ್ನ ಪ್ರತಿಯೊಂದು ಟಿಬ್ಬಿಯಮೇಲೂ ಪಡಿಸಿವೆ ನನ್ನ ನೂರು ಕನಸುಗಳು’ ಅಂತ. ೫೦ ವರ್ಷಗಳಿಂದ ವಾಸಿಸುತ್ತಿರುವ ಇಂಗೆಂಡಿನ ಚಳಿಯಲ್ಲಿ ನಿಮ್ಮ ಅವನ, ನನ್ನ ನೆನಪುಗಳು ಆಹ್ಲಾದಕರವಾಗಿ ಬೆಚ್ಚಗಿಟ್ಟಿವೆ ಇಂದು. ಧನ್ಯವಾದಗಳು. ಶ್ರೀವತ್ಸ ದೇಸಾಯಿ, UK