ವಿಚಿತ್ರಕೊಂದು ವ್ಯಾಖ್ಯೆ
ಹೀಗೇ ಯೋಚನೆ ಆಡುತ್ತ ಓಡುತ್ತ
ಏಳುತ್ತ ಬೀಳುತ್ತ ಥಟ್ಟಂತ ನಿಲ್ಲುತ್ತ
ಅತ್ತೊಮ್ಮೆ ಇತ್ತೊಮ್ಮೆ ನೋಡುತ್ತ
ನೋವ ನುಂಗುತ್ತ ಮೆಲ್ಲನುಸುರಿತು
ವಿಚಿತ್ರಕೊಂದು ವ್ಯಾಖ್ಯೆ ತಿಳೀದಲ್ಲ!
ತಲೆ ತುಂಬಿ ಗುಸುಗುಸು ಪಿಸುಗುಟ್ಟಿ
ತಿಳೀದ ಹಾಗೆ ಮನಸೆಲ್ಲ ಆವರಿಸಿ
ಗಪ್ಪಂತ ಇನ್ನಿಲ್ಲದಂತೆ ಠಾಣೆಯೂರಿದ
ಮಾತೊಂದು ಮರುಗಳಿಗೆ ಸುಳಿವಿಲ್ಲ
ಕಣ್ಮಾಯೆ ಕಣ್ಚಿತ್ರ ! ಬಲೆ ವಿಚಿತ್ರ!
ಬೇಕೋ ಬೇಡವೋ ಉಂಟೊ ಇಲ್ಲೊ
ಘಟ್ಟ್ಯಾಗಿ ಕಾಲೂರಿ ಇದಿಷ್ಟು ಅದಿಷ್ಟು
ಅಲ್ಲಿಷ್ಟು ಇಲ್ಲಿಷ್ಟು ಸವರಿಸಿ ಉಳಿಸದೆ
ತನ್ನ ಜಾಗೀರಂತೆ ಮೆರೆದು ಅದೆತ್ತಲೋ
ಕಣ್ಮಾಯೆ ಕಣ್ಚಿತ್ರ! ಬಲೆ ವಿಚಿತ್ರ!
ಆತು ಬಿಡು ಉಳಿದುದೇನು ಇಲ್ಲಿ ಈಗ
ಇನ್ನೇನು ಉತ್ತರವೇ ಇಲ್ಲದ ನಿಗೂಢ ಪ್ರಶ್ನೆ
ಯಾಕೆ ಇದೆಲ್ಲ ಹೀಗೆ ಅಚ್ಚರಿಯ ಗೂಡು
ಅಲ್ಲೇ ಉಳಿದು ಬಿಟ್ತು ಚುಚ್ಚುತ್ತ ಆಗಲಿಲ್ಲ
ಕಣ್ಮಾಯೆ ಕಣ್ಚಿತ್ರ! ಬಲೆ ವಿಚಿತ್ರ!
ರೊಚ್ಚಿಗೆದ್ದ ಯೋಚನೆ ಕೇಳಿತು ಕಿರುಚಿ
ಗೊತ್ತು ವಿಚಿತ್ರ ಇದೆಲ್ಲ ಹೊಸದಲ್ಲ ಅದೆಲ್ಲ
ಅದಕೇ ಹುಡುಕಾಟ ಅದರ ವ್ಯಾಖ್ಯೆಗೆ
ನೆಗಾಡಿತು ಜೀವ ಹೊಟ್ಟೆ ಹಿಡಿದು ಉರುಳಿ
ಮರುಳೆ ಎಲ್ಲಿಟ್ಟೆ ಬುದ್ಧಿ ಸುದ್ದಿ ? ಕಾಣದೆ
ಬದುಕು ! ಅಷ್ಟೇ! ಇದ್ದೀತೆ ಬೇರೆ ವ್ಯಾಖ್ಯೆ!
-ಸರೋಜಿನಿ ಪಡಸಲಗಿ
ಬೆಂಗಳೂರು
——
ಪದಗಳನ್ನು ಜೋಡಿಸಿ ಮಳೆಯಾಗಿ ನೇತುಹಾಕು ಅದರೊಳಗೇ ನಿಗೂಢತೆಯನ್ನೂ ಮುಚ್ಚಿಡುವ ಗತ್ತು ಇವರಿಗೆ ಸಾಧಿಸಿದೆ!