ಅಜ್ಜ,
ನಮಸ್ಕಾರ.
ಅವಮಾನದಲ್ಲೂ ನೋವುಂಡು ನಕ್ಕ ನೀನು
ಶುದ್ಧ, ಪರಿಶುದ್ಧ.
ಬೆವರ ಹನಿಯ ದೇಶದ
ಜೀವನಾಡಿ. ನೇಗಿಲಯೋಗಿ.
“ಕೊಳಕು ಬಟ್ಟೆ..!”
ಹಾಗೆಂದರೇನು?
ನನ್ನಪ್ಪ, ಅಜ್ಜನದ್ದೂ ಅದೇ ಕಥೆಯಲ್ಲವೆ?
ಆ ಕೊಳಕು ನಿನ್ನ ಬಟ್ಟೆಯದಲ್ಲ…
“ಕೊಳಕು” ಮನಸ್ಸಿನ ಅಧಿಕಾರ ದಾಹಿಗಳದ್ದು!
ಹೊರಗಿನ ಹಡಬೆ ಸೆಕ್ಯುರಿಟಿಯೊಬ್ಬನದ್ದು.
ಕ್ಷಮಿಸು ಅಜ್ಜ,
ಬೆವರ ಬೆಲೆ ಗೊತ್ತಿಲ್ಲದ, ಏರ್ ಕಂಡೀಷನ್ ಜನಕ್ಕೆ
ನಿನ್ನ ನೆಲಮೂಲ ಸಂಸ್ಕೃ ತಿಯ ಅರಿವೇ ಇಲ್ಲ!
ಇದು ಭಾರತ ಕನಸಿನವರ ದುರಂತ.
ಸಿಕ್ಕೋಣ ಅಜ್ಜ,
ಭೂಮಿ. ಗುಂಡಗಿದೆ.
ಇಂಡಿಯಾದಲ್ಲೊಮ್ಮೆ ಭೇಟಿ ಆಗೋಣ!
ಕಷ್ಟಸುಖ ಮಾತಾಡೋಣ… ಅಲ್ಲೊಂದು
ನಸುನಗುವಿನ ಭವ್ಯ ಭವನ ಕಟ್ಟೋಣ…
ಬುದ್ದ, ಬಸವ, ಗಾಂಧಿ, ಅಂಬ್ಕೇಡ್ಕರರ
ಗಿಡ ನೆಟ್ಟು ಗುಲಾಬಿ ಅರಳಿಸೋಣ.
ಮೌಲ್ಯದ ಕಾಳುಗಳ ಬಿತ್ತೋಣ.
ಸ್ವಾಭಿಮಾನದ ಅಜ್ಜ,
ನಿನಗಿದೋ
ನನ್ನ ಮತ್ತೊಂದು ಸೆಲ್ಯುಟ್.
-ಆರ್ ಜಿ ಹಳ್ಳಿ ನಾಗರಾಜ್, ಬೆಂಗಳೂರು —–