ಕಡಲು ಕಾನನದ ನಡುವೆ
ನನಗೆ ನೀನು ನಿನಗೆ ನಾನು
ಏನೆಂದರೆ ಏನೂ ಅಲ್ಲವೆಂಬುದು
ನನಗೂ ತಿಳಿದಿದೆ, ನಿನಗೂ ಸಹ
ಏನಾದರೂ ಆಗಿ ಬಿಡಬಹುದಾದ ಸಂದರ್ಭವನ್ನು
ಈ ಜಗತ್ತು ನಾಜೂಕಾಗಿ ತಡೆಹಿಡಿದು
ನಮ್ಮಿಬ್ಬರ ನಡುವೆ ಕಂಡೂ
ಕಾಣದಂತಹ ಪರದೆಯನ್ನಿಟ್ಟಿದೆ.
ಪರದೆಯ ಅತ್ತ ಕಡೆಯಿಂದ ನೀನು
ಇತ್ತ ಕಡೆಯಿಂದ ನಾನು
ಎಷ್ಟೇ ಪ್ರಯತ್ನಿಸಿದರೂ
ಕಿರುಬೆರಳೂ ಸೋಕಿಸಲಾಗದಂತಹ
ಕಣ್ಣಿಗೆ ಕಾಣದ ತಡೆಗೋಡೆಯನ್ನು
ಕಟ್ಟಲಾಗಿದೆ ನಾಜೂಕಾಗಿ
ಇತ್ತಿತ್ತಲಾಗಿ ಶಬ್ಧ ನಿರೋಧಕವನ್ನೂ
ಅಳವಡಿಸುತ್ತಿರುವ ಗುಮಾನಿಯಿದೆ
ಅದೋ ನೀನು ಮಾತನಾಡುವುದು ಕಾಣುತ್ತಿದ್ದರೂ
ಆಸ್ಪಷ್ಟವಾದ ಶಬ್ಧಗಳು
ನಿಜವಾದ ಅರ್ಥ ಕೊಡುವುದರಲ್ಲಿ ವಿಫಲವಾಗಿವೆ
ಇತ್ತ ನಾನು ಏನು ಹೇಳಿದರೂ
ನನ್ನ ತುಟಿ ಚಲನೆಯ ಹೊರತೂ
ನಿನಗೆ ಮತ್ತೇನೂ ತಿಳಿಯದು
ಎಂಬುದು ಅರ್ಥವಾಗಿ
ನಾನು ಮೌನಕ್ಕೆ ಜಾರಿದ್ದೇನೆ
ಅದೋ ಅತ್ತ ನಿಧಾನವಾಗಿ
ಕಾಡು ನಿನ್ನನ್ನು ಆವರಿಸಿಕೊಳ್ಳುತ್ತಿದೆ
ಇಲ್ಲಿ ಅಳತೆ ಪಟ್ಟಿ ಹಿಡಿದಂತೆ
ಇಷ್ಟಿಷ್ಟೇ ಎತ್ತರಾಗುವ ಅಲೆಗಳು
ನನ್ನ ಕುತ್ತಿಗೆಯವರೆಗೂ ಚಾಚಿವೆ
ಕಡಲು ಕಾನನವು ಆಪೋಷಣ ತೆಗೆದುಕೊಳ್ಳುವ ಮುನ್ನ ಒಮ್ಮೆಯಾದರೂ
ನಿನ್ನ ಕಿರುಬೆರಳ ತುದಿಯನ್ನಾದರೂ
ಸ್ಪರ್ಶಿಸಲೇ ಬೇಕೆನ್ನುವ
ನನ್ನ ಮನದಾಳದ ಬಯಕೆ ಬುಗಿಲೆದ್ದಿದೆ
ಈಜ ಬರದ ನೀನೆಂಬ ನೀನು
ಕಾಡೊಳಗೆ ಕೈಕಾಲು ಬಡಿಯುತ್ತ
ಕಾಣದ ಪರದೆಯನ್ನು
ತೆಗೆದೆಸೆಯುವ ಪ್ರಯತ್ನದಲ್ಲಿ
ಸೋತು, ನಿಶ್ಚಲವಾಗಿ ಕೈಚೆಲ್ಲಿ
ಮರಗಿಡಗಳ ನಡುವೆ ನಿಧಾನವಾಗಿ
ಇಬ್ಬನಿಯಂತೆ ಆವಿಯಾಗುವುದ ಕಂಡು
ಅಹಾಯಕಳಾಗಿದ್ದೇನೆ ಏನೂ ಮಾಡಲಾಗದೆ
ಇತ್ತ ನಾನೂ ಕರಗುತ್ತಿದ್ದೇನೆ
ಉಪ್ಪು ನೀರೊಳಗೆ
ಅವಶೇಷವೂ ಸಿಗದಂತೆ ಅಣುಅಣುವಾಗಿ
ನಾನು ಕಡಲೊಳಗೆ,
ನೀನು ಕಾನನದೊಳಗೆ
ಲೀನವಾದ ಮರಗಳಿಗೆಯೇ
ಅಲ್ಲಿ…. ಅದೋ ಆ ತುದಿಯಲ್ಲಿ
ಆಗಸದಂಚು ಸೇರುವಲ್ಲಿ
ಕಾಡು ಮುಂದೆ ಬಾಗಿ
ನಿಧಾನವಾಗಿ ಯಾರೂ ಗಮನ ನೀಡದಂತೆ
ಮೈ ಮರೆಯುತ್ತಿದೆ ಕಡಳೊಳಗಿಳಿದು
-ಶ್ರೀದೇವಿ ಕೆರೆಮನೆ, ಅಂಕೋಲ
—–