ನಾಡಿನ ಹೆಮ್ಮೆಯ ಕತೆಗಾರರಲ್ಲಿ ಒಬ್ಬರಾಗಿರುವ, ದಾವಣಗೆರೆ ತಾಲ್ಲೂಕಿನ ೧೦ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾರುವ ಬಿ.ಟಿ. ಜಾಹ್ನವಿ ಅವರ ಬಗ್ಗೆ ಹಿರಿಯ ಸಾಹಿತಿ ಮತ್ತು ೧೧ನೇ ದಾವಣಗೆರೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಹಿರಿಯ ಸಾಹಿತಿ ಜಿ ಎಸ್ ಸುಶೀಲಾ ದೇವಿ ಆರ್ ರಾವ್ ಅವರು ಬರೆದ ಅಭಿಮಾನದ ಬರಹವನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ಗೌರವ ಪೂರ್ವಕವಾಗಿ ಪ್ರಕಟಿಸುತ್ತದೆ. ಹಿರಿಯರಿಬ್ಬರಿಗೂ ಅಭಿನಂದನೆಗಳು 🍀💐
(ಸಂಪಾದಕ)
ದಾವಣಗೆರೆಯ ಹೆಮ್ಮೆಯ ಕತೆಗಾರ್ತಿ ಬಿಟಿ. ಜಾಹ್ನವಿ
ಇಂಗ್ಲೀಷ್ ಎಂ.ಎ ಪದವೀಧರೆಯಾದ ಬಿ.ಟಿ. ಜಾಹ್ನವಿಯವರು ಅಸ್ಪೃಶ್ಯತೆ, ದಲಿತ ಹೆಣ್ಣಿನ ಮೇಲೆ ನಡೆಯುವ ಅಮಾನುಷ ದೌರ್ಜನ್ಯ, ತಣ್ಣಗಿನ ಕ್ರೌರ್ಯ, ದಲಿತ ಜಗತ್ತಿನ ತಲ್ಲಣ, ತಾಕಲಾಟಗಳನ್ನು ಕಣ್ಣಾರೆ ಕಂಡು ತಮ್ಮ ಕತೆಗಳನ್ನು ಬರೆದವರು.ಅವರು ದಲಿತ ಹೆಣ್ಣಿನ ನೋವು, ಮುತ್ತು ಕಟ್ಟಿಸಿಕೊಳ್ಳ ಬೇಕಾದ ಅನಿವಾರ್ಯತೆ, ಅವಳ ನೋವು ತಲ್ಲಣಗಳನ್ನು ಪದರ ಪದರವಾಗಿ ತಮ್ಮ ಕತೆಗಳಲ್ಲಿ ಬಿಚ್ಚಿಟ್ಟಿದ್ದಾರೆ.
ಹಾಗೆಯೇ ಆಧುನಿಕ ತರುಣಿಯರ, ಮಧ್ಯಮ ವರ್ಗದ ಹೆಣ್ಣಿನ ಬದುಕಿನ ಸಮಸ್ಯೆ, ತಲ್ಲಣ ತಾಕಲಾಟಗಳನ್ನೂ ಪರಿಣಾಮಕಾರಿಯಾಗಿ ಕತೆಯಾಗಿಸಿದ್ದಾರೆ.
ವಿಧವೆಯಾದ ಹೆಣ್ಣು ಎಲ್ಲರಂತೆ ಸಂಸಾರ ಮಾಡಬಯಸಿದರೂ, ಪ್ರೀತಿಸಿದವನೂ ಕೈ ಕೊಟ್ಟಾಗ ಅನಿವಾರ್ಯವಾಗಿ ಮುತ್ತು ಕಟ್ಟಿಸಿಕೊಂಡು ಮೈಮೇಲೆ ದೇವಿಯನ್ನು ಆವಾಹಿಸಿಕೊಳ್ಳುತ್ತಾಳೆ.(ದೇವರ್ ಬಂದಾವ್ ಬನ್ನಿರೋ).
ಮಾಲೀಕನ ಮನೆಯ ಹೆಣ್ಣುಮಕ್ಕಳು ಆಳುಮಗ ದುರುಗನನ್ನು ಚೇಷ್ಟೆಗಾಗಿ ನೀನು ಸೆಕ್ಸೀ ಎಂದು ಪದೇ ಪದೇ ಹೇಳಿ ಅವನನ್ನು ಉದ್ರೇಕಿಸಿ, ಅದನ್ನು ಅವನು ನಂಬಿ ಮುಂದುವರೆದಾಗ ಅಮಾಯಕ ದುರುಗ ಮಾಲೀಕರಿಂದ ಹೊಡೆತ ತಿಂದು ದುರಂತ ಅಂತ್ಯ ಕಂಡರೆ ಅದೇ ಕತೆಯಲ್ಲಿ ಸಾಹುಕಾರರ ಒತ್ತಾಯಕ್ಕೆ ಅವರ ಜೊತೆಯಲ್ಲಿ ಕೆಲಸದವಳಾಗಿ ಆಲಿಂಡಿಯಾ ಟೂರ್ಗೆ ಹೋದ ರತುನ ಅವರ ಕಾಮದಾಹಕ್ಕೆ ಬಲಿಯಾಗಿ ದುರಂತ ಅಂತ್ಯ ಕಾಣುತ್ತಾಳೆ.( ಧೂಪ್ದಳ್ಳಿ ಸೆಕ್ಸಿ ದುರುಗ)
ದಲಿತಳಾದ ಶಿವಮ್ಮ ಮುಟ್ಟಿದ ಕಾರಣಕ್ಕೆ ಅವಳದ್ದಾದ ಹಂಡೇವನ್ನು – ಸತ್ತ ಅಪ್ಪ,ಅವ್ವ ಉಸಿರಾಡುತ್ತಿದ್ದಾರೆ ಎಂದು ನಂಬಿ ಜೀವವಿಟ್ಟುಕೊಂಡ – ಗಂಡ ಕುಡಿಯಲು ಮಾರಹೊರಟಾಗ ಮಚ್ಚು ಎತ್ತಿದ ಶಿವಮ್ಮ ಹಂಡೇವನ್ನು ಉಳಸಿಕೊಂಡು ದುಡಿದು ಮಕ್ಕಳ ಬದುಕು ಕಟ್ಟಿಕೊಡ್ತಾಳೆ. ಮಕ್ಕಳು ಅವಳ ಹಂಡೇವನ್ನು ಒಯ್ದು ಆರ್ಟ್ ಪೀಸ್ ಮಾಡ ಹೊರಟಾಗ ಹಂಡೇವನ್ನು ತಬ್ಬಿಕೊಂಡೇ ಸತ್ತ ಶಿವಮ್ಮನ ದುರಂತ ಅಂತ್ಯ ಮನ ಕಲಕುತ್ತದೆ.( ಅವ್ವಯ್ಯನ ಹಂಡೇವು)
ಓದಿಗಾಗಿ ಅನಿವಾರ್ಯತೆಯಿಂದ ತನ್ನ ಮೈ ಮಾರಿಕೊಳ್ಳುವ ಅನಿತ, ಗಂಡನ ಮೋಸಕ್ಕೆ ಬಲಿಯಾಗಿ ಆಸ್ತಿ ಕಳೆದುಕೊಂಡ ಗಂಗ, ಬಸವಿ ಕತೆಯ ದೇವೀರಿ ಒಬ್ಬೊಬ್ಬರದ್ದೂ ಮನ ಮಿಡಿಯುವ ಕತೆ. ದಲಿತ ಸಮಾಜದ ಹೆಣ್ಣಿನ ಮೇಲಾಗುವ ಅತ್ಯಾಚಾರ, ಕ್ರೌರ್ಯ, ದುರಂತ ಅಂತ್ಯಗಳು ಓದಿದಾಗ ಮನಸ್ಸಿಗೆ ದಟ್ಟ ವಿಷಾದ ಕವಿಯುತ್ತದೆ.
ಒಟ್ಟು 29 ಕತೆಗಳ ಸಮಗ್ರ ಕಥಾ ಸಂಕಲನ “ಒಬ್ರು ಸುದ್ಯಾಕೆ… ಒಬ್ರು ಗದ್ಲ್ಯಾಕೆ…” ಇತ್ತೀಚೆಗೆ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಬಿಡುಗಡೆಯಾಯಿತು. ಅಂದು ಬಿ.ಟಿ. ಜಾಹ್ನವಿಯವರ “ಧೂಪ್ದಳ್ಳಿ ಸೆಕ್ಸಿ ದುರುಗ ಕತೆಯ ರಂಗರೂಪಕವೂ ಪ್ರದರ್ಶಿತವಾಗಿತ್ತು. ವಾಣಿ ಸತೀಶ್ ಮತ್ತು ವಿದ್ಯಾ ಹೆಗಡೆಯವರ ಮನೋಜ್ಞ ಅಭಿನಯ ಜನರ ಮನಸೂರೆಗೊಂಡಿತ್ತು.
ಬಿ.ಟಿ. ಜಾಹ್ನವಿ ಅವರ ತಂದೆ ಡಾ. ಬಿ.ಎಂ. ತಿಪ್ಪೇಸ್ವಾಮಿಯವರು ನೇತ್ರತಜ್ಞರು. ಶಾಸಕರೂ ಆಗಿದ್ದರು. ಲೋಕಸೇವಾ ಆಯೋಗದ ಸದಸ್ಯರೂ ಆಗಿದ್ದ ತಮ್ಮ ತಂದೆಯವರ ಬಗ್ಗೆ ಬಿ.ಟಿ. ಜಾಹ್ನವಿ “ ಮುಟ್ಟಿಸಿಕೊಂಡವರು” ಕೃತಿಯನ್ನೂ ಹೊರತಂದಿದ್ದಾರೆ.
ಬಿ.ಟಿ. ಜಾಹ್ನವಿಯವರಿಗೆ ಸರ್ ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ, ಶಾಂತಾದೇವಿ ಕಣವಿ ಪ್ರಶಸ್ತಿ, ಡಾ. ವಿಜಯಾ ಸುಬ್ಬರಾಜು ಸಾಹಿತ್ಯ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ, ನವಲ್ಕಲ್ ಬೃಹನ್ಮಠದ ಶಾಂತವೀರಮ್ಮ ಪ್ರಶಸ್ತಿ, ಫಲ್ಗು ಕಥಾ ಪ್ರಶಸ್ತಿ, ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿಗಳು ದೊರೆತಿವೆ.
2013 ರಿಂದ 2016 ರ ವರೆಗೆ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಮಾರ್ಚ್5 ರಂದು ದಾವಣಗೆರೆ ತಾಲ್ಲೂಕಿನ ಹೆಬ್ಬಾಳದಲ್ಲಿ ನಡೆಯಲಿರುವ ಹತ್ತನೆಯ ದಾವಣಗೆರೆ ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೆ ಬಿ.ಟಿ. ಜಾಹ್ನವಿಯವರು ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಅವರ ಸಾಹಿತ್ಯಕ್ಕೆ ಸಂದ ಗೌರವವಿದು. ಇವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಬಿ.ಟಿ. ಜಾಹ್ನವಿಯವರ ಸಾಹಿತ್ಯಯಾನ ನಿರಂತರವಾಗಿ ಸಾಗುತ್ತಿರಲಿ.
-ಜಿ ಎಸ್ ಸುಶೀಲಾದೇವಿ ಆರ್ ರಾವ್
ಹಿರಿಯ ಸಾಹಿತಿ ಮತ್ತು
ದಾವಣಗೆರೆ ಜಿಲ್ಲೆಯ ೧೧ ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ
ದಾವಣಗೆರೆ
—–