ಗಜಲ್
ಬೆಳಕಿನ ನೋಟವನು ನೀಡಲೆಂದೇ ಬಂದೆ ನೀನು ಕತ್ತಲೆಯಾದ ಈ ಬಾಳಿನಲಿ
ಚಂದನೆಯ ದಾರಿಯಲಿ ಕೈಹಿಡಿದು ನಡೆದೆ ನೀನು ದಿಕ್ಕುಗಾಣದ ಈ ಬಾಳಿನಲಿ
ಎಷ್ಟೋ ಪ್ರೇಮದ ಹೂಗಳು ಅರಳಿದವು ಎಲ್ಲರೂ ಅರಿವ ತೆರದಿ ಈ ಲೋಕದಲಿ
ಯಾರೂ ಅರಿಯದ ಒಲವಿನ ಹೂವರಳಿಸಿದೆ ನೀನು ಹಸಿರೇ ಇರದ ಈ ಬಾಳಿನಲಿ
ಪ್ರೀತಿಯೆಂಬುದೇ ಸವೆದುಹೋಯಿತು ಅವರಿವರ ಅಕ್ಷರಗಳ ತುಟಿಗಳಂಚಿನಲಿ
ಮೌನಕೂ ಅರ್ಥ ನೀಡಿ ನನ್ನೆದೆಯಲಿ ಉಸಿರೂದಿದೆ ಚೇತನವಿರದ ಈ ಬಾಳಿನಲಿ
ಯಾರಿಗರಿವಿತ್ತು ಎಲ್ಲೋ ಹೊರಟಿದ್ದ ನಮ್ಮ ದಾರಿಗಳು ಒಂದೆಡೆ ಕೂಡುವವೆಂದು
ಹೆಜ್ಜೆಯೂರದ ಹಾದಿಯಲಿ ಪಥವ ತೋರಿದೆ ನೀನು ಕೊನೆಯಾದ ಈ ಬಾಳಿನಲಿ
ನೀನು ಹೀಗೇ ಪದಗಳಲಿ ಸಿಲುಕಿ ಎಲ್ಲರೂ ಮೆಚ್ಚುವಂತೆ ನರ್ತಿಸುವ ಭಾವವಲ್ಲ
ಸಿದ್ಧನಿಗೆ ಮಾತ್ರ ಒಲಿದು ಬಂದೆ ನೀನು ಯಾರ ನೋಟಕೂ ಸಿಲುಕದ ಈ ಬಾಳಿನಲಿ
-ಸಿದ್ಧರಾಮ ಕೂಡ್ಲಿಗಿ, ವಿಜಯ ನಗರ ಜಿ.