ಅನುದಿನ ಕವನ-೧೧೭೦, ಕವಿ: ಡಾ. ಸುರೇಶ ನೆಗಳಗುಳಿ, ಮಂಗಳೂರು, ದಕ್ಷಿಣ ಕನ್ನಡ, ಕವನದ ಶೀರ್ಷಿಕೆ: ಎಡವಟ್ಟುಗಳು

ಎಡವಟ್ಟುಗಳು

ನಡೆಯುವಲ್ಲೆಲ್ಲಾ ಎಡವುತ್ತೇನೆ
ಮನೆಯೊಳಗೆ ಕಾಲಿಡಲು ಹೊಸಿಲು ದಾಟುವಾಗ
ಇನ್ನೇನು ಚಪ್ಪಲಿ ಹಾಕಬೇಕೆಂದು ಕಾಲು ತೂರುವಾಗ
ನಡೆಯುತ್ತಾ ರಸ್ತೆ ಬದಿಯ ದೊಡ್ಡದಾದ ಫ್ಲೆಕ್ಸ್
ಅದರಲ್ಲಿ ಜೀವಂತಿಕೆ ಮೂಡಿರುವ  ಚಿತ್ರನಟಿ
ಜಾಹೀರಾತಿಗೆ ಕೊಡುವ ಫೋಸು
ನೋಡುತ್ತಾ
ಕಾಲೆಡವಿ ಬಿದ್ದಾಗಲೇ ಗೊತ್ತಾಗುತ್ತದೆ
ನಾನು ತಲಪಲಿರುವ ಗುರಿ ಬೇರೆ ಎಂದು.
ನಡೆಯುವಲ್ಲೆಲ್ಲಾ ಎಡವುತ್ತೇನೆ

ಬಹಳ ಚಿಕ್ಕದಾದ ಕಲ್ಲು ಚಾಣಕ್ಯನಿಗೆ ತಾಗಿದ
ಹುಲ್ಲುಕಡ್ಡಿ
ಎಲ್ಲವೂ ನೆನಪಾಗಿ
ನೆಪವಾಗಿ
ಕಾಲ ಬೆರಳನ್ನು ಕೆಂಪು ಮಾಡಿದ್ದಲ್ಲದೆ
ಮೆದುಳಿನ ಕೇಂದ್ರವನ್ನೇ ಹೊಕ್ಕ ನೋವು
ನಡೆಯುವಲ್ಲೆಲ್ಲಾ ಎಡವುತ್ತೇನೆ.

ಹೊಸತೊಂದು ಇತಿಹಾಸ ಬರೆದ
ಅದೇ ಚಾಣಕ್ಯ
ಎಡವಿದ ಕಾರಣ ಎನ್ನುತ್ತಾರಲ್ಲ
ಅವನದೇ ತಂತ್ರ ಬಳಸಲು ಹೋಗಿ
ಮಹಾಸಭೆಯಲ್ಲಿ
ಅಥವಾ ಹಲವರೆಡೆಯಲ್ಲಿ
ಮೆರೆಯಲಾರದೆ ಎಡವುತ್ತೇನೆ
ಹೌದು
ನಡೆಯುವಲ್ಲೆಲ್ಲಾ ಎಡವುತ್ತೇನೆ

ಯಾರಿಗೂ ಅರಿಯದಂತೆ
ಮನ ಗೆದ್ದ ನಲ್ಲೆಯೊಡನೆ ಕಾಲ ಕಳೆಯುವ
ಗೃಹಸ್ಥನಾಗಿ
ಮನೆಗೆ ಬಂದಾಗ ಪತ್ನಿಗೆ ಸುಳಿವು ಕೊಡಲಾರದೆ
ಎಡವುತ್ತೇನೆ
ಅವಳಿಗೆ ಕೊಟ್ಟ ಉಡುಗೊರೆಯ ಬಿಲ್ಲು
ಹರಿದು ಬಿಸುಟದೇ ಎಡವುತ್ತೇನೆ
ನಡೆಯುವಲ್ಲೆಲ್ಲಾ ಎಡವುತ್ತೇನೆ

ನಡೆವಾಗ ಕಾಲಲ್ಲಿ ಕಣ್ಣಿರಲಿ ಎಂದ ಅಮ್ಮನ ಮಾತು
ನೆತ್ತಿಯಲ್ಲಿ ಕಣ್ಣೇನೋ ಎಂದು ಗದರಿದ ಅಪ್ಪನ ಮಾತು
ಎಲ್ಲಿದೆ ನಿನ್ನ ತಲೆ ಎಂದು ಮೂದಲಿಸಿದ ಗುರು ವಚನ
ಎಲ್ಲವೂ ಶಾಪವಾಯಿತೇ
ಅಥವಾ
ಅವಳ ವೈಯ್ಯಾರದ ನಡೆ ಹಾವಿನ‌ ಜಡೆ
ಮಿಟುಕಿಸಿದ ಕಣ್ಣು
ಒಟ್ಟಾರೆಯಾಗಿ ಎಡವುವಂತೆ ಮಾಡಿತೋ
ಅರಿವಾಗದು.
ನಡೆಯುವಲ್ಲೆಲ್ಲಾ ಎಡವುತ್ತೇನೆ

ಬೇಕು ಮತಿ ಎನ್ನುವುದು ವೇದ ವಾಕ್ಯ ಅಷ್ಟೆ.
ಎಡವದವರಾರು ಒಂದಲ್ಲೊಂದು ಬಾರಿ
ಗೊತ್ತಿದ್ದೋ ಗೊತ್ತಿಲ್ಲದೆಯೋ
ಪರಾವರ್ತಿತ ಪ್ರತಿಕ್ರಿಯೆಯೂ ನ್ಯೂನವಾಯಿತೋ
ಸಂವೇದನೆಗೆ ಒಗ್ಗಿ ಹೋದ ಇಂದ್ರಿಯಗಳೊಡನೆ
ಇನ್ನೂ ನಡೆಯುತ್ತಲೇ ಇರುತ್ತೇನೆ
ಎಡವುತ್ತೇನಾದರೂ
ತಡವರಿಸದೆ.
ಮುಗ್ಗರಿಸುವ ತನಕ.
ನಡೆಯುವಲ್ಲೆಲ್ಲಾ ಎಡವುತ್ತೇನೆ

-ಡಾ. ಸುರೇಶ ನೆಗಳಗುಳಿ, ಮಂಗಳೂರು, ದಕ್ಷಿಣ ಕನ್ನಡ
—–