ಅನುದಿನ ಕವನ-೧೧೭೨, ಹಿರಿಯ ಕವಿ:ಲಿಂಗಾರೆಡ್ಡಿ ಶೇರಿ, ಸೇಡಂ, ಕಲಬುರ್ಗಿ ಜಿಲ್ಲೆ, ಕವನದ ಶೀರ್ಷಿಕೆ: ಅನುದಿನವೂ….

ಅನುದಿನವೂ….

ದಿನದಿನವೂ ಹೂಗಳು
ಅರಳುತ್ತವೆ , ಬಾಡುತ್ತವೆ.
ಮತ್ತೆ ಮೊಗ್ಗು ಹುಟ್ಟುತ್ತವೆ , ಅರಳುತ್ತವೆ .
ಏನೂ ಅನಿಸಲಿಲ್ಲ.

ವರ್ಷಕ್ಕೊಮ್ಮೆ ಎಲೆಗಳು
ಹಣ್ಣಾಗಿ ನೆಲಕ್ಕೆ ಉದುರಿ ಬೀಳುತ್ತವೆ
ಮತ್ತೆ  ಚಿಗುರುತ್ತವೆ  .
ಏನೂ ಅನಿಸಲಿಲ್ಲ .

ಯಾರೋ ಒಬ್ಬ ಅರಿವುಗೇಡಿ
ಟೊಂಗೆ ಸವರಿ ಕತ್ತರಿಸುತ್ತಾನೆ ;
ನೋವಾಗುತ್ತದೆ.
ಸಾವರಿಸಿಕೊಂಡು ಸುಮ್ಮನಾಗುತ್ತಾನೆ
ಮತ್ತೊಂದು ಟೊಂಗೆ ಚಿಗುರುವ ಭರವಸೆಯಿದೆ.

ಮತ್ತ್ಯಾರೋ  ಆ  ಇನ್ನೊಬ್ಬ  ಗಿಡದ ಬುಡವನ್ನೆ ಕಡಿದು ಹಾಕುತ್ತಾನೆ .
ಹತಾಶೆಯಿಂದ ದುಃಖವಾಗುತ್ತದೆ.

ನೆರಳು , ಚೆಲುವು , ಪರಿಮಳ , ಉಸಿರು
ಕಳೆದುಕೊಂಡ ಮೇಲೆ
ಅನುದಿನವೂ
ಅನುಭವಕ್ಕೆ ಬರುತ್ತದೆ.

ತನ್ನದಲ್ಲವೆನ್ನುವುದು
ತನ್ನದೇ ಆಗಿರುತ್ತದೆ.
ಕಳೆದುಕೊಂಡ ಮೇಲೆ
ಅನುಭವಕ್ಕೆ ಬರುತ್ತದೆ.


-ಲಿಂಗಾರೆಡ್ಡಿ ಶೇರಿ, ಸೇಡಂ, ಕಲಬುರ್ಗಿ ಜಿಲ್ಲೆ.
——