ಹೊಸಪೇಟೆ (ವಿಜಯನಗರ): ನಗರದ ಪ್ರತಿಷ್ಠಿತ ವಿಜಯನಗರ ಕಾಲೇಜಿನ 1984-89ನೇ ಸಾಲಿನ ಪಿಯುಸಿ-ಬಿ.ಕಾಂ ಹಳೇ ವಿದ್ಯಾರ್ಥಿಗಳು ಇಲ್ಲಿನ ‘ನೆಲೆ’ ವಿಜಯನಗರ ಉಚಿತ ವಿದ್ಯಾರ್ಥಿ ನಿಲಯದ ಬಡ ಮಕ್ಕಳಿಗೆ ಸುಮಾರು 22500 ರೂ. ಮೌಲ್ಯದ ಪರಿಕರಗಳ ಕೊಡುಗೆಗಳ ಮೂಲಕ ಸಾರ್ಥಕತೆ ಮೆರೆದಿದ್ದಾರೆ.
ಹೌದು! ತೋರಣಗಲ್ಲು ಜಿಂದಾಲ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಮರ್ಷಿಯಲ್ ಸ್ಟೋರ್ಸ್ ಡಿಎಂ ರಮೇಶ್ ಕಂಟ್ಲಿ ನೇತೃತ್ವದಲ್ಲಿ ಬಿ.ಕಾಂ ಸಹಪಾಠಿಗಳಾದ ಎಂ. ಶ್ರೀನಿವಾಸ್, ಶೈಲಜಾ, ರೇಣುಕಾ, ತುಳಸಿ, ಸಿ.ಮಂಜುನಾಥ್ ಮತ್ತು ಸರೋಜ ಅವರು ಭಾನುವಾರ ಸಿಹಿ ಮತ್ತು ಹಣ್ಣುಗಳೊಂದಿಗೆ ತೆರಳಿ ಹಂಪಿ ರಸ್ತೆಯಲ್ಲಿರುವ ‘ನೆಲೆ’ ಹಾಸ್ಟೆಲ್ ಮಕ್ಕಳೊಂದಿಗೆ ಒಡನಾಡಿದರು. ಅಲ್ಲದೇ ವಿದ್ಯಾರ್ಥಿ ನಿಲಯಕ್ಕೆ 22500 ರೂ. ಮೌಲ್ಯದ ಎರಡು ಅಲ್ಮೇರಾಗಳು, ಎರಡು ದೊಡ್ಡ ಗ್ಯಾಸ್ ಸ್ಟೋವ್ ಮತ್ತು ನಾಲ್ಕು ಫ್ಯಾನ್ ಗಳನ್ನು ನೀಡುವ ಮೂಲಕಗಮನ ಸೆಳೆದಿದ್ದಾರೆ. ನೆಲೆ ವಿದ್ಯಾರ್ಥಿಗಳು ಹಾಸ್ಟೆಲ್ ಮತ್ತು ಶಾಲೆಯಲ್ಲಿ ತಮ್ಮ ಗುರುಗಳಿಂದ ಕಲಿತದದ್ದನ್ನು ಅತಿಥಿಗಳ ಮುಂದೆ ಪ್ರದರ್ಶಿಸಿದರು. ವಿದ್ಯಾರ್ಥಿ ನಿಲಯ ಪಾಲಕ ದೇವಾಂಗಪೇಟೆಯ ಮಂಜುನಾಥ್, ಅಧ್ಯಾಪಕಿ-ವಾರ್ಡನ್ ವಿದ್ಯಾ ಅವರು ನೆಲೆ ಹಾಸ್ಟೆಲ್ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ವರ್ಷದ ಹಿಂದೆ ರಮೇಶ್ ಕಂಟ್ಲಿ ಅವರ ಬಡ ವಿದ್ಯಾರ್ಥಿಗಳ ನೆರವಾಗುವ ಮನವಿಗೆ ಸಹಪಾಠಿಗಳಾದ ನಂದಿನಿ, ಅನಿತಾ ನಾಡಿಗೇರ್, ನಾಗರತ್ನ, ಸುಮಾ, ಚಂದ್ರಿಕಾ, ನಾಗರಾಜ್, ಎಂ. ಶ್ರೀನಿವಾಸ್, ಶೈಲಜಾ, ರೇಣುಕಾ, ತುಳಸಿ, ಸರೋಜಾ ಮತ್ತು ಸಿ.ಮಂಜುನಾಥ್ ಅವರು ಸ್ಪಂದಿಸಿದ್ದರು.
ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಮಾತನಾಡಿದ ರಮೇಶ್ ಕಂಟ್ಲಿ ಮತ್ತು ಎಂ. ಶ್ರೀನಿವಾಸ್, ಮುಂದಿನ ದಿನಗಳಲ್ಲೂ ಸಹಪಾಠಿಗಳ ಸಹಭಾಗಿತ್ವದಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರೆಸುವುದಾಗಿ ತಿಳಿಸಿದರು.
ಕಾರ್ಯಕ್ರಮಕ್ಕೆ ಮುನ್ನ 35 ವರ್ಷಗಳ ಬಳಿಕ ತಾವು ಐದು ವರ್ಷ ಕಲಿತ ವಿಜಯನಗರ ಕಾಲೇಜು ಆವರಣದಲ್ಲಿ ಖುಷಿಯಿಂದ ಸುತ್ತಾಡಿ ಸಹಪಾಠಿಗಳು ಸಂಭ್ರಮಿಸಿದರು.
—–