ಅನುದಿನ ಕವನ-೧೧೭೪, ಕವಿ: ರಾಜೇಂದ್ರ ಪ್ರಸಾದ್, ಮಂಡ್ಯ

ಪ್ರೇಮ ಒಂದಿರದಿದ್ದರೆ
ಎಷ್ಟು ನಷ್ಟ ಎಷ್ಟು ಕಷ್ಟ
ಒಂದು ಕವಿತೆ ಹುಟ್ಟದಷ್ಟು
ಒಂದು ಮಾತು ಉಳಿಯದಷ್ಟು
ಸನಿಹ, ದೂರಗಳ ನಡುವೆ
ಅಂತರ ಏನೂ ಅನಿಸದಷ್ಟು!

ಕಣ್ಣಿನೊಳಗೆ ಕನಸು ಕಟ್ಟದಷ್ಟು
ಎದೆಯೊಳಗೆ ಸೊಗಸು ಸಿಗದಷ್ಟು
ಎಷ್ಟು ಕಷ್ಟ ಪ್ರೇಮ ಒಂದಿರದಿದ್ದರೆ
ಬಣ್ಣಗಳು ಬರಿದು ಬಾಣಗಳು ಮೊಂಡು
ಬೆಳಕು ಕೂಡ ಕುರುಡು ಕತ್ತಲು.

ಸಣ್ಣ ನೋಟ, ಕಿರುನಗೆ ಮುಂದಕೊಂದು
ಒಂದೇ ಒಂದು ಹೆಜ್ಜೆ ನಡೆದು ಬರದಿದ್ದರೆ
ಏನು ಚೆಂದ ಹೇಳು
ವಾರೆಗಣ್ಣ ಕೋಪ, ನೆತ್ತಿಗೇರಿದ ತಾಪ
ಮುರಿವ ತುಟಿಯ ಕೊಂಕು ಇರದಿದ್ದರೆ
ಹೇಗೆ ಹೇಳು, ಪ್ರೇಮ!

ಎಷ್ಟು ನಷ್ಟ ಎಷ್ಟು ಕಷ್ಟ
ಪ್ರೇಮ ಒಂದಿರದಿದ್ದರೆ,
ಎದೆಯೊಳಗೆ ಹೂವು ಬಳ್ಳಿ ಹಬ್ಬದಿದ್ದರೆ
ಹಬ್ಬಿ ಘಮಲು ನಮ್ಮ ತಬ್ಬದಿದ್ದರೆ.

-ರಾಜೇಂದ್ರಪ್ರಸಾದ್, ಮಂಡ್ಯ
—–