ಒಂದು ರಸ್ತೆ ನನ್ನ ಹೆತ್ತ ಊರಿಗೆ ಹೋಗುತ್ತದೆ. ಹೆತ್ತೂರಿನಿಂದ…❤
ಊರೆಂದರೆ ಅಸಂಖ್ಯ ನೆನಪುಗಳು.
ಸಾವಿರಾರು ಘಟನೆಗಳು
ಹತ್ತಾರು ಸನ್ಮಾನಗಳ ಮೇಲೆ ನೂರಾರು ಅವಮಾನಗಳು.
ಈಗ ಅಲ್ಲಿ ಬದುಕಿಲ್ಲವಾದರೂ
ಊರೆಂದರೆ ಕೊನೆಗಾಲದ ಭದ್ರತಾ ಠೇವಣಿ…
ನಮ್ಮವರು ತಮ್ಮವರ ನಡುವೆ
ದೀಪಾವಳಿಯ ಸಂಭ್ರಮ
ದೊಡ್ಡಮ್ಮನ ಸುಗ್ಗಿ…
ಗೌರಿಹಬ್ಬದ ಸಂಜೆಯ ಮೂರೆಲೆ ಗೌಜು.
ಲಾಭದ ಪ್ರಶ್ನೆಯೇ ಇಲ್ಲದ ತೋಟ
ನಷ್ಟದ ಮುಖವೇ ಇಲ್ಲದ
ಬೈನೆ ಕೊಂಬಿನ ಜಿನುಗು
ಅಪ್ಪನ ಬಡತನ
ಅಮ್ಮನ ಒಂದು ಕಾಲದ ಬೆರಗು
ದೊಡ್ಡಪ್ಪನ ಹೆಗಲು
ಚಿಕ್ಕಪ್ಪನ ಕಿರು ಬೆರಳ ದಾರಿ
ಅಣ್ಣಂದಿರ ಜೊತೆ ಹೊಳೆಯ
ಮೀನು ಶಿಕಾರಿ
ಅಜ್ಜನೆಂಬ ಎತ್ತರ
ಅಜ್ಜಿಯ ಅಡುಗೆ ಮನೆಯ
ಅಕ್ಷಯವಾಗುವ ರೊಟ್ಟಿ, ಕಾಪಿ ಕುಡಿಕೆ
ಸಗಣಿ ಸಾರಿಸಿದ ನೆಲ
ಸರಿದಾಡುವ ಕಿಟಕಿ ಬಾಗಿಲು
ಊರಿಗಾಗಿ ತವಕಿಸುವ ಜೀವ
ಅದ್ಯಾಕೋ ನಗರದ ಸಂಕೀರ್ಣತೆಯ
ಜೊತೆಗೆ ರಾಜಿ ಮಾಡಿಕೊಂಡಿದೆ…
ಆದರೂ ಊರೆಂದರೆ
ಸದಾ ನನ್ನೊಳಗೆ ಬೆಳಕಾಗುವ ಹಣತೆ
-ಚಲಂ ಹಾಡ್ಲಹಳ್ಳಿ, ಹಾಸನ
—–