ಅನುದಿನ ಕವನ-೧೧೮೧, ಕವಯಿತ್ರಿ: ರಮ್ಯ ಕೆ ಜಿ, ಮೂರ್ನಾಡು, ಕೊಡಗು, ಕವನದ ಶೀರ್ಷಿಕೆ:ಅವನೊಂದು ಪುಸ್ತಕ ಕೊಟ್ಟ

ಅವನೊಂದು ಪುಸ್ತಕ ಕೊಟ್ಟ

ಮಾತು ಹೊರ ಜಾರೋ ಹೊತ್ತಿಗೆ
ನಿಲ್ದಾಣವೇ ಬಂದಿಳಿದಿತ್ತು…
ಆ ಪಯಣ ಎಷ್ಟು ಬೇಗ
ಮುಗಿದು ಹೋಯಿತು!

ಸೀಟಿನ ಎರಡೂ ತುದಿಗಿದ್ದ
ನಮ್ಮ ನಡುವೆ
ಸಮನಾಂತರ ಗೆರೆ ಎಳೆಯುತ್ತಿದ್ದ
ಗಾಳಿಗೆ
ಯಾವ ವಾಸನೆಯಿತ್ತು?

ನಡುವಿನ ಸಣ್ಣ ಜಾಗವನು
ಯಾರೂ ತುಂಬಬಾರದೆಂಬ
ಹಪಹಪಿಯೂ,
ಯಾರೋ ಬಂದಾಗ,
ನಾವಿಬ್ಬರೂ ಜತೆಸೇರಬಹುದೆಂಬ
ಆಸೆಯ ಕಂಪನವೂ
ಅವನನು ತಾಕಿರಬಹುದೇ?

ಏನೋ ಹೇಳುವುದಿತ್ತು,
ಇನ್ನೇನೋ ಕೇಳುವುದಿತ್ತು
ಸಣ್ಣ ತೂಕಡಿಕೆಗೆ
ತೋಳಿಗೊರಗಬಹುದಿತ್ತು
ನಗಬಹುದಿತ್ತು,
ಯಾವುದೂ ನಡೆಯಲಿಲ್ಲ…
ಹೂದಳದ ನರಗಳನ್ನು ಎದೆಗಂಟಿಸಿಕೊಂಡ
ಪುಸ್ತಕವೊಂದನ್ನು ನಾ ಓದುತ್ತಲೇ ಇದ್ದೆ…


-ರಮ್ಯ ಕೆ ಜಿ, ಮೂರ್ನಾಡು, ಕೊಡಗು

—–