ವಿಶಿಷ್ಟ ವಿಶ್ವ ರಂಗಭೂಮಿ ದಿನಾಚರಣೆ: ಮನೆಯಂಗಳದಲ್ಲಿ ಹಿರಿಯ ರಂಗಕರ್ಮಿ  ಡಾ. ಶಿವಕುಮಾರ ಸ್ವಾಮೀಜಿಗೆ ರಂಗ ಗೌರವ

ಬಳ್ಳಾರಿ, ಮಾ.28: ಎಂಬತ್ತರೆಡರ ಹರೆಯದ ರಂಗಕರ್ಮಿ ಕುಡದರಹಾಳ್ ಡಾ.ಶಿವಕುಮಾರ ಸ್ವಾಮೀಜಿ ಅವರು 2024ನೇ ಸಾಲಿನ ರಂಗ ಗೌರವಕ್ಕೆ ಪಾತ್ರರಾದರು.
ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಮತ್ತು ಸಂಸ್ಕೃತಿ ಪ್ರಕಾಶನದ ಸಹಯೋಗದಲ್ಲಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕುಡದರ ಹಾಳ್ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾ ವಿಶ್ರಾಂತ ಡಿಡಿಪಿಐ ಹೆಚ್.ಎಂ. ಮಲ್ಲಿಕಾರ್ಜುನ ಸ್ವಾಮಿ ಮತ್ತು ವೇದಿಕೆ, ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮಂಜುನಾಥ್ ಅವರು ಡಾ. ಶಿವಕುಮಾರ ಸ್ವಾಮೀಜಿ ಅವರನ್ನು ಸನ್ಮಾನಿಸಿ ಗೌರವಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಎಂ. ಮಲ್ಲಿಕಾರ್ಜುನ ಸ್ವಾಮಿ ಅವರು,  ನಾಡಿನ ಹಿರಿಯ ರಂಗಕರ್ಮಿ ಡಾ. ಶಿವಕುಮಾರ ಸ್ವಾಮೀಜಿ ಅವರ ಗ್ರಾಮೀಣ ರಂಗ ಸೇವೆ ಅನನ್ಯ. ತಮ್ಮ ಆಯುರ್ವೇದ ವೈದ್ಯ ವೃತ್ತಿ ಜತೆ ಐದು ದಶಕಗಳ ಕಾಲ ಗ್ರಾಮೀಣ ರಂಗಭೂಮಿಗೆ ಮಹತ್ವದ ಕೊಡುಗೆ ನೀಡಿರುವ ಸ್ವಾಮೀಜಿ ಅವರನ್ನು ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಅವರು ಈ ಬಾರಿಯ ರಂಗ ಗೌರವಕ್ಕೆ ಆಯ್ಕೆ ಮಾಡಿರುವುದು ನಿಜಕ್ಕೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೂಡನಂಬಿಕೆಗಳ ಕಡು ವಿರೋಧಿಯಾಗಿದ್ದು ಈ ಕುರಿತು ಬರಹಗಳ ಮೂಲಕ, ಮೌಖಿಕವಾಗಿ ಸದಾ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಸ್ವಾಮೀಜಿ ಅವರ ಕಾರ್ಯ ಅನನ್ಯ ಎಂದು ಶ್ಲಾಘಿಸಿದರು.


ಮುಖ್ಯ ಅತಿಥಿಯಾಗಿದ್ದ ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಬಿ.ಎಂ ಸವದತ್ತಿ ಮಾತನಾಡಿ,  ಡಾ. ಶಿವಕುಮಾರ ಸ್ವಾಮೀಜಿ ಅವರು ನಾಟಕಕಾರರಾಗಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ಸುಸಜ್ಜಿತ,ಸುಸಂಸ್ಕೃತ ಸುವ್ಯವಸ್ಥಿತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಎಂದರು.
ನಾಟಕ ರಚನಾಕಾರರಾಗಿ, ಕಲಾವಿದರಾಗಿ, ಸಿನಿಮಾ, ಧಾರವಾಹಿಗಳಲ್ಲಿ ಅಭಿನಯಿಸುವ ಮೂಲಕ ಸಾಂಸ್ಕೃತಿಕ ಲೋಕಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹಿರಿಯ ರಂಗ ಚೇತನಕ್ಕೆ ಮನೆಯಂಗಳದಲ್ಲಿ ಗೌರವ ದೊರೆತಿರುವುದು ಇಡೀ ಗ್ರಾಮಕ್ಕೆ ಸಂತಸ ತಂದಿದೆ ಎಂದು ಹರ್ಷಿಸಿದರು.
ತಾತಾರವರು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶಗಳನ್ನು ಒದಗಿಸುತ್ತ ಉತ್ತಮ ಗುಣಮಟ್ಟದ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶಕರಾಗಿದ್ದಾರೆ ಎಂದು ಸವದತ್ತಿ ಅವರು ಹೇಳಿದರು.                     ಪ್ರಾಸ್ತಾವಿಕವಾಗಿ ಮಾತನಾಡಿದ ಸಿ.ಮಂಜುನಾಥ್,  ರಂಗಭೂಮಿಗೆ ಅನುಪಮ ಸೇವೆ ಸಲ್ಲಿಸಿದ ಹಿರಿಯ ಹಾಗೂ ಯುವ ರಂಗ ಕಲಾವಿದರು, ರಂಗ ಕರ್ಮಿಗಳನ್ನು ಗುರುತಿಸಿ ಅವರವರ ಮನೆಗಳಿಗೆ ತೆರಳಿ ಅವರ ಕುಟುಂಬ ಸದಸ್ಯರು, ಬಂಧು ಮಿತ್ರರ ಸಮ್ಮುಖದಲ್ಲಿ ಸತ್ಕರಿಸಿ ಗೌರವಿಸುವ ಮೂಲಕ ಪ್ರತಿ ವರ್ಷವೂ ವಿಶ್ವ ರಂಗಭೂಮಿ ದಿನವನ್ನು ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.

2004-05ರಲ್ಲಿ ನಾಡೋಜ ಬೆಳಗಲ್ಲು ವೀರಣ್ಣ, ನಾಡೋಜ ಡಾ. ಸುಭದ್ರಮ್ಮ ಮನ್ಸೂರು ಅವರಿಂದ ಆರಂಭಗೊಂಡ ಸತ್ಕಾರ ಪ್ರಸ್ತುತ 2024ರಲ್ಲೂ ಮುಂದುವರೆದಿದೆ. ಈ ಬಾರಿ ಹಿರಿಯ ರಂಗ ಚೇತನ ಡಾ. ಶಿವಕುಮಾರ ಸ್ವಾಮೀಜಿ ಅವರನ್ನು ಸತ್ಕರಿಸಿ‌ ಗೌರವಿಸುತ್ತಿರುವುದು ನಮಗೆ ಹೆಮ್ಮೆ ಎಂದು ತಿಳಿಸಿದರು.
ಹಿರಿಯ ಬಯಲಾಟ ಕಲಾವಿದೆ ನಾಡೋಜ ಕಪ್ಪಗಲ್ಲು ಪದ್ಮಮ್ಮ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀ ರಮೇಶ ಗೌಡ ಪಾಟೀಲ್, ಶ್ರೀ ರಂಗಾರೆಡ್ಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆರಾದ ಬಿ. ಸುಜಾತಮ್ಮ, ಉಮಾರಾಣಿ ಇಳಕಲ್ಲು, ಹಿರಿಯ ರಂಗಕಲಾವಿದರಾದ ವೆಂಕೋಬಾಚಾರ್, ಕೆ. ಗಾದಿಲಿಂಗನ ಗೌಡ, ಸುಬ್ಬಣ್ಣ, ಶಿವೇಶ್ವರ ಗೌಡ ಕಲ್ಲುಕಂಬ, ಆರ್ ಎನ್ ಚಂದ್ರಮೌಳಿ, ಕೂಡ್ಲಿಗಿಯ ಜ್ಯೋತಿ, ಗೆಣಕಿನಹಾಳ್ತ ತಿಮ್ಮನಗೌಡ, ಎಂ. ಮೋಹನ ರೆಡ್ಡಿ, ಮೋಕ ರಮೇಶ್, ಕೊಳಗಲ್ಲು ಉಮರ್, ಅಮರೇಶಯ್ಯ, ಯುವ ರಂಗ ಕರ್ಮಿ ಸಂಸ ಸುರೇಶ್, ನೇತಿ ರಘುರಾಮ್, ಅಣ್ಣಾಜಿ ಕೃಷ್ಣಾರೆಡ್ಡಿ ಸೇರಿದಂತೆ ಹಲವರನ್ನು ಗುರುತಿಸಿ ಗೌರವಿಸಿರುವುದು ಎರಡು ಸಂಸ್ಥೆಗಳ ಹೆಗ್ಗಳಿಕೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಸಿರುಗುಪ್ಪ ತಾಲೂಕು ಸರಕಾರಿ ನೌಕರರ ಸಂಘದ ನಿವೃತ್ತ ಕಾರ್ಯದರ್ಶಿ ಹನುಮಂತಪ್ಪ, ನಿವೃತ್ತ ಅಧ್ಯಾಪಕ ಪಂಪಾಪತಿ, ಕುಡೆದರಹಾಳ್ ಗ್ರಾಪಂ ಪಿಡಿಓ ಲಿಂಗಯ್ಯ ಸ್ವಾಮಿ ಮಾತನಾಡಿದರು.
ಕುಡೆದರಹಾಳ್ ಗ್ರಾಪಂ ಅಧ್ಯಕ್ಷ ಸೋಮನಗೌಡ, ಗ್ರಾಮದ ಸರಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಅಧ್ಯಾಪಕರು, ವಿದ್ಯಾರ್ಥಿಗಳು, ತಾತಾರವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
*****