ಏ. 2ಕ್ಕೆ ಅಂತರಾಷ್ಟ್ರೀಯ ಜಾನಪದ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರು ಅಸ್ತಂಗತರಾಗಿ ಒಂದು ವರ್ಷವಾಯ್ತು. ಬಳ್ಳಾರಿಯ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಮತ್ತು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಸಹಯೋಗದಲ್ಲಿ ಆಯೋಜಿಸಿದ್ದ ಮೊದಲವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಡೋಜ ಬೆಳಗಲ್ಲು ವೀರಣ್ಣ ಅವರ ಕುರಿತು ಕವಿ, ರಂಗ ಕಲಾವಿದ, ಉಪನ್ಯಾಸಕ ಎಎಂಪಿ ವೀರೇಶಸ್ವಾಮಿ ಅವರು ವಾಚಿಸಿದ ಈ ಕವಿತೆ ಸಹೃದಯರ ಮನಗೆದ್ದಿತು.
ಕುಗ್ಗದ ಕಂಠ ಬಗ್ಗದ ದೇಹ
ಸಾವಿಗೆ ಒಗ್ಗೀತು ಹೇಗೆ?
ಬಹು ಜಟಿಲ ಪ್ರಶ್ನೆ
ದೇವ ಲೋಕದ ಇಂದ್ರ
ಮಾನವರ ಕುಣಿಸಬೇಕಲ್ಲ ಚಂದ
ವಿಚಾರ ಮಾಡಿದ ಬಹುದಿನದಿಂದ
ನೆನಪಾಯಿತು …ಬೆಳಗಲ್ಲು
ಕರೆ ಬಂದೇ ಬಿಟ್ಟಿತು
ಹಲೋ..ವೀರಣ್ಣಾ.ನಾನು ದೇವಣ್ಣಾ
ನೀನು ತೊಗಲುಗೊಂಬೆ
ಕುಣಿಸುವೆಯಂತೆಲ್ಲ ಚೆಂದದಿ
ದೇಶ ವಿದೇಶ ಸುತ್ತಿದೆಯಂತೆ
ದೇವ ಲೋಕಕ್ಕೂ ಬಂದು ಬಿಡಯ್ಯಾ
ನಾವು ನೋಡಬೇಕು ಗೊಂಬೆ ಕುಣಿತ
ದೇವಲೋಕದ ಕರೆಗೆ ಓಗೊಟ್ಟು
ಭೇಷ್ ಭೇಷ್ ಈಗಲೇ ಬರುವೆ! ಎನುತಾ..
ಅವಸರದಿ ಹೋಗಿಯೇ ಬಿಟ್ಟರು ..
ಗೊಂಬೆಗಳ ಇಲ್ಲಿಯೇ ಬಿಟ್ಟು…
ಹಾರ್ಮೋನಿಯಂ ಕೂಡ ಕೈ ಬಿಟ್ಟು
ಶಕುನಿ ಪಾತ್ರದ ಬಣ್ಣ ಅಳಿಸಿ ..
ಕಲಾವಿದರ ಕಣ್ಣು ತೇವವಾಗಿಸಿ..
-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.