ಪ್ರೇಮ
ಖಾಲಿಯಾಗದಕ್ಷಯಬಟ್ಟಲೆದುರು
ಕರಗದ ಸಾಲು.
ಒಮ್ಮೆ
ಹೊಳೆಯೊಂದು ಹೆಬ್ಬಂಡೆಗೆ ತಲೆಚಚ್ಚಿಕೊಂಡು.
ಒಮ್ಮೆ
ಹೆಬ್ಬಂಡೆಯೊಂದು ಹೊಳೆಗೆ ತಿವಿದು
ಕೆಲ ಬಂಡೆ ಸವೆಯದು
ತುಸುವೂ ತೇವವಾಗದು
ಕೆಲವು ಹೊಳೆ ನಿಂತಲ್ಲಿಯೇ ಹರಿದು
ಹರಿದಲ್ಲಿಯೇ ನಿಂತು
ಎಲ್ಲ ಇದ್ದರೂ ಏನೂ ಇಲ್ಲದಾಗಿ
ಏನೂ ಇರದೆ ಇದ್ದರೂ ಸಿರಿತನ ದಕ್ಕಿ
ಹಕ್ಕಿಯೊಂದು ನೀಲಿ ಬಣ್ಣ ಮೆತ್ತಿಕೊಂಡು
ಗೂಡಿನಲ್ಲಿ ಆಕಾಶವನ್ನು ಸಾಕಿದಂತೆ
ದುಂಬಿಯೊಂದು ಇಬ್ಬನಿಯ ಸೋಕಿ
ನದಿಯನ್ನು ಉಟ್ಟಕೊಂಡಂತೆ
ಸುಮ್ಮನೆ ಎದುರು ಬದಿರು ಕೂತೂ
ಮಾತು ಕಲ್ಲಾದಂತೆ
ಮೌನ ಕೇಳಿಸಿದಂತೆ
ಅಕಾರಣ ಬೇಸರಗಳ ಜಾತ್ರೆಯಲ್ಲಿ
ನೀರವ ತೇರಿನ ಭಾರ ಬೀದಿ
ಪುಸ್ತಕದೊಳಗೇ ಉಸಿರು ಗಟ್ಟಿದ ನವಿಲಗರಿ
ದಟ್ಟ ಗ್ರೀಷ್ಮದಲ್ಲಿ ನೀರಡಿಕೆ
ಸುಡು ಬಿಸಿಲಿನಲ್ಲಿ ಕೊರೆವ ಛಳಿ
ಎಲೆ ಒಂದು ಉದುರಿದರೆ ಆಕಾಶ ಕಳಚಿದ
ನೋವು
ಮದ್ದಿಲ್ಲ ಕೊನೆಯಿಲ್ಲ
ಸತ್ಯದ ಮೊನಚು ಉಳಿ ಕೆತ್ತಿಟ್ಟ
ಕಟು ಬಾಳ ಶಿಲ್ಪ
-ವಾಸುದೇವ ನಾಡಿಗ್, ಬೆಂಗಳೂರು