ಬಳ್ಳಾರಿ ಮಿಂಚೇರಿ ಗುಡ್ಡದಲ್ಲಿ ಮೂಲಸೌಕರ್ಯ;5 ಕೋಟಿ ರೂ ಪ್ರಸ್ತಾವನೆ -ದಮ್ಮೂರು ಶೇಖರ್

ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಮಿಂಚೇರಿ ಗುಡ್ಡದಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪಗಳು, ವಿಶ್ರಾಂತಿ ಕೊಠಡಿ,ಪರಗೋಲುಗಳಿಗೆ ವಿದ್ಯುತ್ ದೀಪ ವ್ಯವಸ್ಥೆ ಸೇರಿದಂತೆ ಇನ್ನೀತರ ಮೂಲಸೌಕರ್ಯ ಒದಗಿಸುವಂತೆ ಸಾರ್ವಜನಿಕರಿಂದ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಿಂಚೇರಿ ಗುಡ್ಡದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ 16 ವಿಶ್ರಾಂತಿ ಕೋಣೆಗಳ ಕಟ್ಟಡವು ಹಾಗೂ ಕುದುರೆ ಕೊಟ್ಟಿಗೆ ಸರಿಯಾದ ನಿರ್ವಹಣೆ ಇಲ್ಲದೆ ದುರಸ್ತಿಗಿಡಾಗಿರುತ್ತವೆ.ಈ ಪ್ರವಾಸಿ ತಾಣಕ್ಕೆ ವೀಕೆಂಡ್ ಅಲ್ಲಿ ಸರಿಸುಮಾರು 1000-1500 ಚಾರಣಿಗರು ಟ್ರೆಕಿಂಗ್ ಮಾಡುತ್ತಾರೆ ಎಂದು  ದಮ್ಮೂರು ಶೇಖರ್ ತಿಳಿಸಿದರು.
ಈ ಪ್ರವಾಸಿ ತಾಣಕ್ಕೆ ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ 5 ಕೋಟಿ ರೂಪಾಯಿ ಅನುದಾನವನ್ನು ನೀಡಿದರೆ ಅತ್ಯುತ್ತಮ ಪ್ರವಾಸಿ ತಾಣವಾಗಿ ಹೊರಹೊಮ್ಮುತ್ತದೆ. ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಕುರಿತು 5 ಕೋಟಿ ಅನುದಾನವನ್ನು ಬುಡಾಗೆ ಒದಗಿಸುವಂತೆ ಕೋರಿ ಮುಖ್ಯಮಂತ್ರಿಗಳಿಗೆ, ಅರಣ್ಯ ಸಚಿವರಿಗೆ ಮತ್ತು ನಗರಾಭಿವೃದ್ಧಿ ಸಚಿವರಿಗೆ ಶೀಘ್ರ ಮನವಿ ಸಲ್ಲಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾದ ವೀರೇಂದ್ರ ಕುಂದಗೋಳ, ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರವಿಶಂಕರ್, ಗ್ರಾಮಾಂತರ ಉಪ ವಲಯ ಅರಣ್ಯಧಿಕಾರಿಯಾದ ನಾಗರಾಜ್ ಗೌಡ, ನಗರ ಉಪವಲಯ ಅರಣ್ಯಾಧಿಕಾರಿಯಾದ ವಿರುಪಾಕ್ಷಿ, ಮಿಂಚೇರಿ ಅರಣ್ಯ ರಕ್ಷಕರಾದ ರಾಜಶೇಖರ್ ಅವರು ಉಪಸ್ಥಿತರಿದ್ದರು.