ಬಣಗಾರ್ ಎಂಬ ಕ್ಯಾಮರಾ ಮಾಂತ್ರಿಕ!! ಚಿತ್ರ-ಆಪ್ತ ಬರಹ:ಭರತ್ ರಾಜ್, ಕೆರೆಮನೆ. ಶೃಂಗೇರಿ.

  • ಬಣಗಾರ್ ಎಂಬ ಕ್ಯಾಮರಾ ಮಾಂತ್ರಿಕ  !!!

ಅಂದಿನ ಹಂಪಿ ಎಂದಾಗ ನಮಗೆ ನೆನಪಾಗುವುದು ವಿಜಯನಗರ ಸಾಮ್ರಾಜ್ಯದ ವೈಭವ. ಇಂದಿನ ಹಂಪಿ ಎಂದಾಗ ನೆನಪಾಗುವುದು ಅಲ್ಲಿ ಮೌನವಾಗಿ ನಿಂತ ನೂರಾರು ಶಿಲ್ಪಕಲಾ ಅದ್ಭುತಗಳು. ಅವುಗಳ ಜೊತೆ ಜೊತೆಯಲ್ಲೇ ನೆನಪಾಗುವ ಹೆಸರು ಎಂದರೆ ಆ ಅದ್ಭುತಗಳನ್ನು ತಮ್ಮ ಅನುಪಮ ಛಾಯಾಗ್ರಹಣದಿಂದ ಸೆರೆ ಹಿಡಿಯುವ ಶಿವಶಂಕರ ಬಣಗಾರ್ ಎಂಬ ಕ್ಯಾಮರಾ ಮಾಂತ್ರಿಕ.

ಶಿವನಿಗೆ ಮೂರು ಕಣ್ಣು ಎಂಬ ಮಾತಿದೆ. ಈ ಶಿವಶಂಕರರಿಗೆ ಕ್ಯಾಮರಾ ಎನ್ನುವ ಮೂರನೇ ಕಣ್ಣೇ ಛಾಯಾಗ್ರಹಣದ ಮಾಯಾಲೋಕ ಸೃಷ್ಟಿಸುವ ಸಾಧನ. ವಿಭಿನ್ನ ಹಾಗೂ ವಿಶಿಷ್ಟ ದೃಷ್ಟಿಕೋನ, ಸಮ್ಮೋಹಕ ಸೆರೆ ಇವರ ಚಿತ್ರ ವೀಕ್ಷಕರನ್ನು ವಿಸ್ಮಯಲೋಕಕ್ಕೆ ಸೆಳೆದೊಯ್ಯುತ್ತವೆ. ಇವರ ಒಂದೊಂದು ಚಿತ್ರ ಒಂದೊಂದು ಕತೆ ಹೇಳುತ್ತದೆ. ಹಂಪಿಯಲ್ಲಾಗಲಿ ಅಥವಾ ಇವರ ಪ್ರವಾಸ ತಾಣಗಳಲ್ಲಾಗಲೀ ಪ್ರತಿನಿತ್ಯ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಮನಮೋಹಕವಾಗಿ ಸೆರೆ ಹಿಡಿಯುವುದು ಬಣಗಾರರ ಹವ್ಯಾಸ.

ನಮ್ಮ ‘ ಕೆರೆಮನೆ ‘ ಕುಟುಂಬದ ಆತ್ಮೀಯ ಮಿತ್ರರಾದ ಮೈಸೂರಿನ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಜೀವಂಧರ ಕುಮಾರ್ ಅವರು ಬಣಗಾರ್ ಬಗ್ಗೆ ನನಗೆ ಆಗಾಗ ಹೇಳುತ್ತಿದ್ದರು. ಬಣಗಾರರ ಹಲವಾರು ಚಿತ್ರಗಳನ್ನೂ ತೋರಿಸಿದ್ದರು. ನನಗೆ ಅರಿವಿಲ್ಲದೆಯೇ ಅವರ ಅಭಿಮಾನಿಯಾದೆ. ಅವರನ್ನು ಕಾಣುವ, ಅವರೊಂದಿಗೆ ಕೆಲ ಸಮಯ ಕಳೆಯುವ ಬಯಕೆ ನನ್ನಲ್ಲಿ ಮೂಡಿತು. ಇತ್ತೀಚೆಗೆ, ಅಂದರೆ ಮಾರ್ಚ್ 24-03-2024   ರಂದು ಶೃಂಗೇರಿಗೆ ಬಣಗಾರ್ ಬಂದಿರುವ ವಿಷಯ ತಿಳಿಯಿತು. ಬಹುದಿನಗಳ ನನ್ನ ಬಯಕೆ ನೆರವೇರುವ ಸಮಯ ಒದಗಿತು. ನಮ್ಮ ಕರೆಗೆ ಆತ್ಮೀಯವಾಗಿ ಸ್ಪಂದಿಸಿ ನಮ್ಮ ‌’ ಕೆರೆಮನೆ ‘ ಗೆ  ಬಣಗಾರ್ ಬಂದರು.
ನಮ್ಮ ತೋಟವನ್ನೆಲ್ಲಾ ಕಂಡು ಖುಷಿಪಟ್ಟು ನಮ್ಮಲ್ಲಿನ ಹೂ, ಹಣ್ಣುಗಳನ್ನು ಸೆರೆ ಹಿಡಿದು ಫೇಸ್‌ಬುಕ್‌‍ನಲ್ಲಿ Live ಆಗಿಯೂ ತೋರಿಸಿದರು. ಬಣಗಾರರ ಸರಳತೆ, ಪ್ರೀತಿ ಭರಿತ ಮಾತು ನಮ್ಮೆಲ್ಲರಲ್ಲಿ ನಲಿವು ಮೂಡಿಸಿತು. ಬಣಗಾರರ ಭೇಟಿ ‘ಕೆರೆಮನೆ ‘ ಕುಟುಂಬಕ್ಕೆ ಒಂದು ಅವಿಸ್ಮರಣೀಯ ಅನುಭವ.
ತುಂಬು ಹೃದಯದ ಧನ್ಯವಾದಗಳು ಬಣಗಾರ್ ಸರ್ !

ಮೊದಲು ಪತ್ರಿಕಾ ವರದಿಗಾರ, ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ ಬಣಗಾರರು ‘ ಉದಯವಾಣಿ ‘ ಯಲ್ಲಿ ‘ ನೀರುಕಾಗೆ ತೊಟ್ಟಿಲೋತ್ಸವ ‘ ಎಂಬ ಸುದ್ದಿ – ಚಿತ್ರಣಕ್ಕೆಂದು ಪಕ್ಷಿ ಛಾಯಾಗ್ರಾಹಕರಾದರು. ಮುಂದಿನ ದಿನಗಳಲ್ಲಿ ವನ್ಯಜೀವಿ ಛಾಯಾಗ್ರಹಣದ ಕಡೆಗೆ ಆಸಕ್ತಿ ವಿಸ್ತರಿಸಿಕೊಂಡು ಅದರಲ್ಲೂ ಉತ್ತಮ ಸಾಧನೆ, ಹೆಸರು ಮಾಡಿದರು.
ಹಂಪಿ ಬಳಿಯ ‘ ತೇಜಸ್ವಿ ಲೋಕ ‘ ನಿರ್ಮಾತೃ ಪಂಪಯ್ಯ ಸ್ವಾಮಿ ಮಳೇಮಠ್ ಅವರ ಸಂಪರ್ಕ ದೊರೆತು ವನ್ಯಜೀವಿ ಛಾಯಾಗ್ರಹಣದ ತಾಂತ್ರಿಕ ಅಂಶಗಳನ್ನು ಕರಗತ ಮಾಡಿಕೊಂಡ ಬಣಗಾರ್ ಪಂಪಯ್ಯ ಅವರನ್ನು ತಮ್ಮ ಗುರುವೆಂದೇ ಭಾವಿಸಿದ್ದಾರೆ.

 

2012 ರಲ್ಲಿ ಫೇಸ್‌ಬುಕ್‌ ಪ್ರವೇಶಿಸಿದ ಬಣಗಾರ್ ಬಲು ಬೇಗ ತಮ್ಮ ಸೊಗಸಾದ ಹಾಗೂ ವಿಭಿನ್ನ ಶೈಲಿಯ ಚಿತ್ರಗಳಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನೂ ಮಿತ್ರರನ್ನೂ ಸಂಪಾದಿಸಿದರು. ಈಗಲೂ ಸಾವಿರಾರು followers ಹೊಂದಿರುವ ಬಣಗಾರ್ ಇಂದು ನಮ್ಮ ನಾಡು ಕಂಡ ಅಪ್ರತಿಮ ಛಾಯಾಗ್ರಾಹಕರು. ದೇಶ ವಿದೇಶಗಳ ಛಾಯಾಗ್ರಾಹಕರು ಇವರ ಮಾರ್ಗದರ್ಶನದಲ್ಲಿ ಹಂಪಿಯ ಅನುಪಮ ಸೌಂದರ್ಯ ಸೆರೆ ಹಿಡಿಯಲು ಬರುತ್ತಾರೆ. ಆಸಕ್ತರು ಇವರನ್ನು  9448234764  ಸಂಖ್ಯೆಯಲ್ಲಿ ಸಂಪರ್ಕಿಸಿ ಇವರ ಶಿಬಿರಗಳ ಮಾಹಿತಿ / ಅಪಾಯಿಂಟ್ಮೆಂಟ್ ಪಡೆಯಬಹುದು.

ಅತ್ಯದ್ಭುತ ಛಾಯಾಗ್ರಹಣದಿಂದ ಬಣಗಾರರು ಅಸಂಖ್ಯಾತ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಗೆ ಭಾಜನರಾಗಿದ್ದಾರೆ.
ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಪ್ರಶಸ್ತಿ ಗಳಿಸಿರುವ ಬಣಗಾರರ ಚಿತ್ರಗಳು ಅಮೆರಿಕದ ಖ್ಯಾತ ಕನ್ನಡ ಸಂಸ್ಥೆ ‘ AKKA ‘ ( ‘ ಅಕ್ಕ ‘ ) ದ ‘ ಐಸಿರಿ ‘ ಗ್ರಂಥವನ್ನು ಅಲಂಕರಿಸಿವೆ.

ಹಲವಾರು ಛಾಯಾಚಿತ್ರ ಪ್ರದರ್ಶನಗಳಲ್ಲಿ ಬಣಗಾರರ ಚಿತ್ರಗಳಿಗೆ ಎಂದಿಗೂ ವಿಶೇಷ ಸ್ಥಾನ ಮಾನ ಇದ್ದದ್ದೇ. ಆಸಕ್ತ ಅಭಿಮಾನಿಗಳಿಗೆ ಇವರ ಚಿತ್ರಗಳು ಸುಂದರ ಚೌಕಟ್ಟಿನಿಂದ ಉತ್ತಮ ಬೆಲೆಯಲ್ಲಿ ಲಭ್ಯವಿದೆ. ಕೊಡುಗೆ, ಸ್ಮರಣಿಕೆ, ಸನ್ಮಾನದ ರೂಪದಲ್ಲಿ ನೀಡಲು ಬಣಗಾರರ ಚಿತ್ರಗಳು ಬಲು ಸೂಕ್ತ.

ಮಿತ್ರ ಜೀವಂಧರ ಕುಮಾರ್ ಹೇಳುವಂತೆ ಶಿವಶಂಕರ ಬಣಗಾರ್ ಎಂದರೆ   “ಹಂಪಿಯ  ಬ್ರ್ಯಾಂಡ್ ಅಂಬ್ಯಾಸಿಡರ್ ”                                             ಆಸಕ್ತರು ಸಂಪರ್ಕಿಸಬಹುದು

ಶಿವಶಂಕರ ಬಣಗಾರ್:
9448234764

✍️ಭರತ್ ರಾಜ್, ಕೆರೆಮನೆ. ಶೃಂಗೇರಿ.
—–