ಅನುದಿನ ಕವನ-೧೧೯೩, ಕವಿ: ಸುಧೀಂದ್ರ ನಾರಾಯಣ ಜೋಯಿಸ್, ಶಿವಮೊಗ್ಗ,

ಈಗ ಕವಿತೆ ನನ್ನೆದುರು‌ ನಿಂತಿದೆ.
ಓದುವವರಿಹರೆಂದು
ನೀನೀಗ ಬಲ್ಲೆ.
ಹಾಗೆಂದೇ ನಾನೀಗ
ಹೆದರಿದ ಹುಲ್ಲೆ!

ನನ್ನ ಪಾಡೆನಗಿತ್ತು
ಸುಮ್ಮನೆ ಬರೆಯುವುದ ಬಿಟ್ಟು
ನನಗೆ ತಂದೆ ಬಿಕ್ಕಟ್ಟು.

ನೀ ಬರೆದೆಯೆಂದರೆ
ಕವಿತೆ.
ನಾನು ಅಕ್ಷರಗಳಲ್ಲೇ ಅವಿತೆ.
ಓದುವವರು ಬಿಟ್ಟಾರೆಯೆ ನನ್ನ ಟೀಕು ಚಾಕುವಿನ ಹರಿತ
ಜೀವವಿದ್ದಾಗಲೇ
ಪೋಸ್ಟ್ಮಾರ್ಟಮ್ಮು!
ನಿಕಷಕ್ಕಿಡುವರು
ನಿನ್ನ ಬರಹದ ದಮ್ಮು.

ಒಂದಿಷ್ಟು ನಿನ್ನ ಬರಹದಲಿ
ಉಸಿರಾಡಿ ಬದುಕುತ್ತಿದ್ದೆ.
ಟೀಕುಮಂದಿಯ ಕೈಗೆ
ಬಡಪಾಯಿ ನನ್ನ ಸುಲಿಗೆ.
ಕೆನ್ನ ಮೈ ಸವರಿ,
ಎದೆಮುಟ್ಟಿ ಭುಜತಟ್ಟಿ
ಕವಿತೆಯಾಗಿರುವ
ನಿನ್ನ ಪದಪುಂಜಗಳ
ಮಾನಭಂಗ.

ಕೊನೆಗೆ ನೀನೇ ಕೃಷ್ಣನಾಗಬೇಕು.
ಅಕ್ಷರದ ಅರಿವೆ
ಎಸೆದು
ಮೈಮುಚ್ಚಲು.
ಸುಮ್ಮನಿರುವುದಿಲ್ಲ
ತುಂಟ ನೀನು
ನನ್ನ ತಂಟೆ ಬಿಡುವುದೇ ಇಲ್ಲ
ಏನು ಸುಖ ಪಡುವೆ
ಹೇಳು?
ಬರೆಯುವ ಕವಿಗಳು
ಬಹಳ.
ಪದಗಳ ದೊಂಬರಾಟ
ನಿನಗೂ ಹೊಸದಲ್ಲ.
ರಸಗ್ರಹಣದ ಕಲೆ
ಕೆಲವರೇ ಬಲ್ಲರು.

ಮತ್ತೂ ನನ್ನ ತುಟಿಯತ್ತ ನಿನ್ನ ಕಣ್ಣು.
ಬಲ್ಲೆ ನಿನ್ನ
ಕವಿತೆ ಹೊಸೆಯುವ
ಮೊದಲೇ ಒಸಗೆ ಬೇಡುವ ನಿನ್ನ ಬಯಕೆ.
ಓಡುವೆನೆ ,ಹಿಡಿಯುವೆ
ಮತ್ತೆ ಅಕ್ಷರಗಳಲಿ.
ನಾನು ವಿಲಿವಿಲಿ.
ಪಿಳಿಪಿಳಿ.

-ಸುಧೀಂದ್ರ ನಾರಾಯಣ ಜೋಯಿಸ್, ಶಿವಮೊಗ್ಗ
—–