ಅನುದಿನ ಕವನ-೧೧೯೮, ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಎರಡೂ ತಟಸ್ಥ! 

ಎರಡೂ ತಟಸ್ಥ!

ನನಗೀಗ ಹೊಳೀತು ಒಂದಂಶ
ಏದುತ್ತ ಉಸಿರಿತು ಮನ ಬುದ್ಧಿಗೆ
ಹುಬ್ಬೇರಿಸಿ ಕಣ್ಣರಳಿಸಿ ಬುದ್ಧಿ ಕೇಳಿತು
ಅದೇನಂಥ ವಿಚಾರ ಹೇಳಬಾರದೆ

ಉಸಿರೆಳೆದು ನುಂಗಿ ಎಂಜಲು
ಕುಳಿತು ವಿರಾಮಾಸನದಿ ಚೊಕ್ಕಾಗಿ
ಹೇಳಿತು ಮನ ಕೇಳಿಲ್ಲಿ ಚಿತ್ತವಿಟ್ಟು
ಎಲ್ಲಾ ಸುಳ್ಳು ಬರಿದೆ ಏನಿಲ್ಲ ಇಲ್ಲಿ

ತುಂಬಿದೆ ಬರಿ ಟೊಳ್ಳು ಪೊಳ್ಳು ಖಾಲಿ
ಅದ ಬಿಟ್ಟು ಏನಿಲ್ಲ ತಲೆ ಕೈ ಹೇಗ್ಹೇಗೊ
ಹಿಂದು ಮುಂದಾಡಿಸಿ ನೋಡಿತು
ಕಣ್ಣ ತುಂಬ ಎಂಥದೊ ಭಾವ ತುಂಬಿ

ಯಾಕೀಗ ಈ ವಿಶೇಷ ಹೊಳಹು
ಬೋಧಿವೃಕ್ಷದಡಿಯ ಬುದ್ಧನಾದೆ ನೀ
ಮತ್ತೆಲ್ಲಿ ಎಡವಿದೆ ಸೌಖ್ಯ ತಾನೆ
ಬುದ್ಧಿ ಕೇಳಿತು ಕಕ್ಕುಲತೆ ಉಕ್ಕಿ ಬಂದು

ಅಲ್ವೆ ಚಣದಲೆ ಅದಲು ಬದಲು
ಹೀಗೆ ಬಂದು ಹಾಗೆ ದಿನ ಕಂತಿ
ಬಿಳುಪು ಕಪ್ಪಾಗಿ ಕೆಂಪು ಬೂದಾಗಿ
ನಂಬಿ ನಿಲ್ಲಲು ಇಲ್ಲ ತಾವು ಸಾಲದೆ ಇಷ್ಟು

ಯಾಕಿಷ್ಟು ತಕರಾರು ಅದಕೆಲ್ಲ ಒಪ್ಪಿ
ಬಂದಿರೋದಿಲ್ಲಿ ಹೊಸದಲ್ಲ ಅದು
ಬದುಕಿನದೊಂದು ಮುಖವದು ಅಷ್ಟೇ
ಹೇಳಿದ ಬುದ್ಧಿ ಮತ್ತೆ ತಟಸ್ಥ!
ಕಂಗೆಟ್ಟ ಮನವೂ ತಟಸ್ಥ !!

-ಸರೋಜಿನಿ ಪಡಸಲಗಿ
ಬೆಂಗಳೂರು