ಅಂದೇ ನನ್ನ ಜನುಮ ದಿನ
ಅಂಬಲಿ ಸಿಕ್ಕಿದ್ದೇ…
ಅಂಬೇಡ್ಕರರನ್ನೇ ಮರೆತಿರಿ
ಸೂರು ಕಂಡಿದ್ದೇ…
ಮೈಮರೆತು ನಿದ್ದೆ ಹೋದಿರಿ…
ವಿದ್ಯೆ-ವಿನಯ- ಸಿದ್ಧಿ-ಸಮ್ಮಾನ
ಪಡೆಯಲೇನು ಮಾಡಿದಿರಿ..?
ರಥದ ಚಕ್ರಗಳು ತುಕ್ಕು ಹಿಡಿದಿವೆ
ಹೊಕ್ಕು ನೋಡಿರಿ ಸೋದರರೇ…
ಕೆಟ್ಟಗೆ ನೋಡಿದನೇ..
ಕೆಟ್ಟಗೆ ಆಡಿದನೇ…
ಕೆಟ್ಟದು ಮಾಡಿದನೇ..
ಸಟೆಯನು ಸುಟ್ಟು
ದಿಟವನು ಮೆರೆಯಿರಿ.
ಕಟ್ಟ ಕಡೆಯವ ….
ನೆಟ್ಟಗೆ ನಿಂತ ದಿನ
ಬೇಡದೆ ನೀಡಿದ ದಿನ
ಶೋಕವ ನೀಗಿದ ದಿನ..
ಲೋಕವ ತಿದ್ದಿ ತೀಡಿ
ತನಗೆ ತಾ ಬೆಳಕಾಗಿ
ತಥಾಗತನಂತೆ
ಜಗವ ಸೋಕಿ ತಾಕಿದ ದಿನ
ಅಂದೇ ನನ್ನ ಜನುಮ ದಿನ…
ಅಂದೇ ನಿಮ್ಮ ಜನುಮ ದಿನ…
-ಸವಿತಾ ನಾಗಭೂಷಣ, ಶಿವಮೊಗ್ಗ
—–