2 ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಬಳ್ಳಾರಿ ಜಿಲ್ಲಾಡಳಿತ ಸಕಲ ಸಿದ್ಧತೆ:ಡಿಸಿ ನಕುಲ್

ಬಳ್ಳಾರಿ:ಬಳ್ಳಾರಿ ಜಿಲ್ಲೆಯ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯು ರಾಜ್ಯ ಚುನಾವಣಾ ಆಯೋಗದ ಆದೇಶದ ಅನುಸಾರ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲನೇ ಹಂತದ ಚುನಾವಣೆಯು ಡಿ.22ರಂದು ಮತ್ತು ಎರಡನೇ ಹಂತದ ಚುನಾವಣೆಯು ಡಿ.27ರಂದು ನಡೆಯಲಿದೆ.
ಮೊದಲನೇ ಹಂತದಲ್ಲಿ ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಹೊಸಪೇಟೆ ಮತ್ತು ಕಂಪ್ಲಿ ಹಾಗೂ ಎರಡನೇ ಹಂತದಲ್ಲಿ ಸಂಡೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ ಮತ್ತು ಹರಪನಹಳ್ಳಿ ತಾಲ್ಲೂಕುಗಳಿಗೆ ಚುನಾವಣೆ ಜರುಗಲಿದೆ.
ಮೊದಲ ಹಂತದ ಚುನಾವಣೆಯ ಅಧಿಸೂಚನೆಯನ್ನು ಡಿ.7ರಂದು ಹೊರಡಿಸಲಾಗಿದ್ದು,ಎರಡನೇ ಹಂತದ ಚುನಾವಣೆಯ ಅಧಿಸೂಚನೆ ಡಿ.11ರಂದು ಜಿಲ್ಲಾಧಿಕಾರಿಗಳು ಹೊರಡಿಸಲಿದ್ದಾರೆ. ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಡಿ.11(ಶುಕ್ರವಾರ) ಮತ್ತು 2ನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಡಿ.16(ಬುಧವಾರ) ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮೊದಲ ಹಂತಕ್ಕೆ ಡಿ.12 ಮತ್ತು ಎರಡನೇ ಹಂತಕ್ಕೆ ಡಿ.17. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಮೊದಲ ಹಂತಕ್ಕೆ ಡಿ.14ರಂದು ಕೊನೆಯ ದಿನ. 2ನೇ ಹಂತಕ್ಕೆ ಡಿ.19 ಕೊನೆಯ ದಿನವಾಗಿದೆ.
ಮತದಾನ ಅವಶ್ಯವಿದ್ದರೆ, ಮತದಾನವನ್ನು ಮೊದಲ ಹಂತಕ್ಕೆ ಡಿ.22ರಂದು ಮತ್ತು ಎರಡನೇ ಹಂತಕ್ಕೆ ಡಿ.27ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ನಡೆಸಲಾಗುತ್ತದೆ. ನೀತಿ ಸಂಹಿತೆಯು ಡಿ.31ರವರೆಗೆ ಚುನಾವಣೆ ನಡೆಯುವ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿ ಪ್ರದೇಶಕ್ಕೆ ಮಾತ್ರ ಜಾರಿ ಬಂದಿರುತ್ತದೆ.
*ಬಳ್ಳಾರಿ ಜಿಲ್ಲೆಯ ಒಟ್ಟು ಗ್ರಾಮ ಪಂಚಾಯತಿಗಳ ವಿವರ*
ಬಳ್ಳಾರಿ ತಾಲೂಕಿನಲ್ಲಿ 25 ಗ್ರಾಪಂಗಳ 522 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕುರುಗೋಡು ತಾಲೂಕಿನಲ್ಲಿ 12 ಗ್ರಾಪಂಗಳ 241 ಸದಸ್ಯ ಸ್ಥಾನಗಳಿಗೆ,ಸಿರಗುಪ್ಪ ತಾಲೂಕಿನ 27 ಗ್ರಾಪಂಗಳ 489 ಸದಸ್ಯ ಸ್ಥಾನಗಳಿಗೆ, ಹೊಸಪೇಟೆ ತಾಲೂಕಿನ 13 ಗ್ರಾಪಂಗಳ 274 ಸದಸ್ಯ ಸ್ಥಾನಗಳಿಗೆ ಮತ್ತು ಕಂಪ್ಲಿ ತಾಲೂಕಿನ 10 ಗ್ರಾಪಂಗಳ 212 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 5 ತಾಲೂಕುಗಳ 87 ಗ್ರಾಪಂಗಳ 1738 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಸಂಡೂರು ತಾಲೂಕಿನ 26 ಗ್ರಾಪಂಗಳ 511 ಸದಸ್ಯ ಸ್ಥಾನಗಳಿಗೆ,ಕೂಡ್ಲಿಗಿ ತಾಲೂಕಿನ 25 ಗ್ರಾಪಂಗಳ 482 ಸದಸ್ಯ ಸ್ಥಾನಗಳಿಗೆ,ಹಗರಿಬೊಮ್ಮನಹಳ್ಳಿ ತಾಲೂಕಿನ 20 ಗ್ರಾಪಂಗಳ 352 ಸದಸ್ಯ ಸ್ಥಾನಗಳಿಗೆ,ಕೊಟ್ಟೂರು ತಾಲೂಕಿನ 13 ಗ್ರಾಪಂಗಳ 195 ಸದಸ್ಯ ಸ್ಥಾನಗಳು, ಹಡಗಲಿ ತಾಲೂಕಿನ 26 ಗ್ರಾಪಂಗಳ 430 ಸದಸ್ಯ ಸ್ಥಾನಗಳಿಗೆ ಹಾಗೂ ಹರಪನಳ್ಳಿ 35 ಗ್ರಾಪಂಗಳ 608 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಜಿಲ್ಲಾಡಳಿತ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಎರಡನೇ ಹಂತದಲ್ಲಿ 145 ಗ್ರಾಪಂಗಳ 2578 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತದೆ.
ಜಿಲ್ಲೆಯ 237 ಗ್ರಾಪಂಗಳ 4399 ಸದಸ್ಯ ಸ್ಥಾನಗಳಿದ್ದು,ಅವುಗಳಲ್ಲಿ 232 ಗ್ರಾಪಂಗಳ 4316 ಸದಸ್ಯ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ.