ಅನುದಿನ ಕವನ-೧೨೦೩, ಕವಯಿತ್ರಿ: ಸಂಘಮಿತ್ರೆ ನಾಗರಘಟ್ಟ, ಕವನದ ಶೀರ್ಷಿಕೆ:ಅರಿವೆಂಬ ದೀವಟಿಗೆ ಹಿಡಿದಾತ

ಅರಿವೆಂಬ ದೀವಟಿಗೆ ಹಿಡಿದಾತ

ಸಮಯದ ಹಿಡಿತಕ್ಕೆ
ಸಿಲುಕದ ತುಡಿತಗಳೇ
ಹೀಗೆ..

ಕಡುಗತ್ತಲಿನ ನಡುವೆ
ಯಾರ ಕೈಗೂ ಸಿಗದ
ಮಿಂಚಿನ ಹುಳದಂತೆ
ಗರಿ ಬಿಚ್ಚಿ ಹಾರುತ್ತವೆ
ತಮ್ಮಷ್ಟಕ್ಕೇ ತಾವೇ..

ತೊಟ್ಟ ಚಾಳೀಸಿನೊಳಗೇ
ಗಡಿಗಳ ಮೀರುತ
ಕಡಲಿನಾಳದ ಆಕ್ಟೋಪಸ್
ಆಗಸದಾಚೆಯ ಗ್ಯಾಲಕ್ಸಿ
ಇಳೆಯ ಮೇಲಿನ ಅಮೀಬಗಳ
ದುಗುಡವ ಅರಿಯುತ್ತಾ..

ಬುಡ್ಡಿಯ ಹಿಡಿದು
ಜಗವೆಂಬ ಬಯಲಲಿ
ಅರಿವ ಬುಗ್ಗೆಯ
ಬಾನಾಡಿಗಳ ಹಾರಿಬಿಟ್ಟವ
ಇಂದು ಎಲ್ಲರೆದೆಯ
ಮಿಡಿತ- ಸಿಡಿತ


-ಸಂಘಮಿತ್ರೆ ನಾಗರಘಟ್ಟ
—–