ಅನುದಿನ ಕವನ-೧೨೦೭, ಕವಯಿತ್ರಿ: ರೂಪ ಗುರುರಾಜ, ಬೆಂಗಳೂರು, ಕವನದ ಶೀರ್ಷಿಕೆ: ಇದಲ್ಲವೇ ಪ್ರೀತಿ?

ಇದಲ್ಲವೇ ಪ್ರೀತಿ?

ಯೋಚಿಸಿ ನೋಡಿ ಇದಲ್ಲವೇ ಪ್ರೀತಿಯ ರೀತಿ?
ಸಾಮಾನ್ಯ ವಿಷಯಗಳಲ್ಲೂ ಇದು ದಕ್ಕುವ ರೀತಿ!

ಪಿಂಗಾಣಿ ಕಪ್ಪು ಬಿಗಿಯಾಗಿ ಹಿಡಿದಿಟ್ಟುಕೊಂಡ ಕಾಫಿ
ಹೆಜ್ಜೆ ಇಟ್ಟಾಗಲೆಲ್ಲ ತುಸುವೇ ತುಳುಕುತ್ತಾ ನಲಿವಂತೆ

ನಾವು ಕುಳಿತಾಗಲೆಲ್ಲಾ ನಮಗಾಸರೆಯಾಗಿ ಕುರ್ಚಿಯ ನಾಲ್ಕುಕಾಲುಗಳು ಭದ್ರವಾಗಿ ನಿಲ್ಲುವಂತೆ

ನಡೆದಾಡುವಾಗ ನಮ್ಮ ಪಾದದ ಭಾರವನ್ನು
ಭೂಮಿ ಒಂದಿಷ್ಟೂ ಮಿಸುಕದೆ ಹೊರವಂತೆ

ನಮ್ಮಿಷ್ಟದಂತೆ ಅದೆಷ್ಟೇ ಬಾರಿ ತೆರೆದು ಹಾಕಿದರೂ
ಬಾಗಿಲು , ಕಿಟಕಿಗಳು ಗಾಳಿ ಬೆಳಕ ಬರಗೂಡುವಂತೆ

ಅದೆಷ್ಟೊಂದು ತಾಳ್ಮೆ , ಕಾಯುವಿಕೆ , ಸಮರ್ಪಣೆ
ಇರಬೇಕು ಈ ಪ್ರೀತಿ ಎನ್ನುವ ಭಾವವೊಂದಕ್ಕೆ

ಕಪಾಟಿನಲ್ಲಿ ಮಡಿಸಿಟ್ಟ ಇಷ್ಟದ ಬಟ್ಟೆಗಳು
ದಿನವೂ ನಾವು ತೊಡುವುದನ್ನೇ ಕಾಯುವಂತೆ

ಪ್ರತಿ ದಿನವೂ ಅದೇ ಹೆಜ್ಜೆ, ಅದೇ ಭಾವವಾದರೂ
ಮತ್ತದೇ ಆದರದಿಂದ ಸ್ವಾಗತಿಸುವ ಮೆಟ್ಟಿಲಂತೆ

ಮುಖದ ಮೇಲಿನ ನೀರಿನ ಹನಿಗಳ ರಾಶಿಯನ್ನು
ಬೇಸರಿಸದೆ ಒರೆಸುವ ಹತ್ತಿಯ ವಸ್ತ್ರದಂತೆ

ದಿನ ದಿನವೂ ಪ್ರತಿ ಹೆಜ್ಜೆಯಲ್ಲೂ ಸ್ಪುರಿಸುತ್ತದೆ
ಪ್ರೀತಿಯ ಭಾವ ಪ್ರತಿ ವ್ಯಕ್ತಿ, ವಸ್ತುವಿನಲ್ಲೂ

ಸಾಮಾನ್ಯ ಸಂಗತಿಗಳಲ್ಲೂ ಉಸಿರಾಡುವ ಇದನು ಗುರುತಿಸುವ ಮನಸ್ಸೊಂದಿದ್ದರೆ ಸಾಕು ನಮ್ಮಲ್ಲೂ

 

-ರೂಪ ಗುರುರಾಜ, ಬೆಂಗಳೂರು