ನಾನಂತೂ ..
ಅವಳನ್ನು ಇದ್ದಂತೆ ಪ್ರೀತಿಸುತ್ತೇನೆ
ಮೊದಲಿಗಿಂತ ಜಾಸ್ತಿ ಪ್ರೀತಿಸುತ್ತೇನೆ .
ಕೆದರಿದ ಕೂದಲನ್ನು ಸುಮ್ಮನೆ ಹಾಗೆ
ಹಿಂದೆ ಸರಿಸಿ ಮುಡಿ ಕಟ್ಟುತ್ತಾಳೆ
ಕಣ್ಣು ಕಾಡಿಗೆ ಮರೆತು ಯಾವ ಕಾಲವಾಯ್ತೊ ?
ತುಟಿಗಂಟಿದ ಬಣ್ಣ ಎಲ್ಲಿ ಕಳೆದು ಹೋಯ್ತೊ ?
ಕೆನ್ನೆ ಮೇಲಿನ ರಂಗನು ಮಗಳಿಗೆ ದಾಟಿಸಿಬಿಟ್ಟಿದ್ದಾಳೆ
ಮನೆ ಮತ್ತು ಮಕ್ಕಳು ಇಷ್ಟೆ ಅವಳ ಪ್ರಪಂಚವಾಗಿಬಿಟ್ಟಿದೆ
ಇರಲಿ …,
ನಾನಂತೂ …
ಅವಳನ್ನು ಇದ್ದಂತೆ ಪ್ರೀತಿಸುತ್ತೇನೆ
ಮೊದಲಿಗಿಂತ ಜಾಸ್ತಿ ಪ್ರೀತಿಸುತ್ತೇನೆ .
ಜೋತು ಬಿದ್ದ ಎದೆಗಳಲ್ಲಿ
ಹೆಣ್ತನಕ್ಕಿಂತ ಈಗ ತಾಯ್ತನವೆ ಕಾಣುತ್ತದೆ
ಮಡತೆ ಬಿದ್ದ ನಡುವಲ್ಲಿ ಅವತ್ತಿನ ಬಳುಕಾಡುವ
ಬಳ್ಳಿತನ ಉಳಿದಿಲ್ಲ
ಹೊಕ್ಕುಳಾಳದ ಮಾದಕತೆ ಕಳೆದು
ಕರುಳ ಬಳ್ಳಿಯ ಮಮತೆಯಷ್ಟೆ ಕಾಣುತ್ತದೆ
ಬಸಿರು ಉಳಿಸಿಹೋದ ಗೆರೆಗಳು
ನಮ್ಮದೆ ಕೂಸು ಬಿಡಿಸಿದ ಮೊದಲ ಚಿತ್ರವೇನೊ ಅನಿಸುತ್ತದೆ
ಇದೇ ಕಾರಣಕ್ಕೇನೊ ?
ನಾನಂತೂ …
ಅವಳನ್ನು ಇದ್ದಂತೆ ಪ್ರೀತಿಸುತ್ತೇನೆ
ಮೊದಲಿಗಿಂತ ಜಾಸ್ತಿ ಪ್ರೀತಿಸುತ್ತೇನೆ .
ಮನೆ ,ಮಕ್ಕಳು ಲಾಲನೆ ಪಾಲನೆ
ಕಸ ಮುಸುರೆ ಅಡುಗೆ ಹೀಗೆ
ಯಾವತ್ತಿಗೂ ಮುಗಿಯದ ಕೆಲಸ ಕಾರ್ಯಗಳಲ್ಲಿ
ಅವತ್ತಿನ ಅವಳು ಕಳೆದೆ ಹೋಗಿದ್ದಾಳೆ
ಹೀಗೆ ದುಡಿದು ದಣಿದು ಸುರಿಸುವ ಬೆವರಿನಲ್ಲಿ
ಕೆರಳಿಸುವ ಕಾಮಕಸ್ತೂರಿಯ ಅಮಲಿಲ್ಲ
ಒಂದೇಟಿಗೆ ಸೆಳೆಯುತ್ತಿದ್ದ ಆ ಸುಳಿಯಂಥ ಸೆಳವಿಲ್ಲ
ಇಷ್ಟಕ್ಕೂ ಅವಳಿಗೀಗ ಅಲ್ಲೆಲ್ಲೊ ಮರೆತ
ಸೌಂದರ್ಯದ ನೆನಪಾದರೂ ಇದೆಯಾ ?
ಉಹುಂ .., ಅದರ ಗ್ಯಾರಂಟಿ ಇಲ್ಲ .
ಆದರೆ …,
ನಾನಂತೂ
ಅವಳನ್ನು ಇದ್ದಂತೆ ಪ್ರೀತಿಸುತ್ತೇನೆ
ಮೊದಲಿಗಿಂತ ಜಾಸ್ತಿ ಪ್ರೀತಿಸುತ್ತೇನೆ .
ಬಿಡಿ , ಆಗಿನ ಆ ಅವಳು
ಒಂದು ಹುಚ್ಚು ಆಕರ್ಷಣೆ ಅಷ್ಟೆ
ಕಾಮದ ಕುರುಡು ಕಣ್ಣಿಂದ ಕಾಣುತ್ತಿದ್ದ
ಪ್ರೀತಿಯ ಬಣ್ಣ ಮೆತ್ತಿದ್ದ ಮೋಹವಷ್ಟೆ
ಆದರೆ ಈಗ ಅವಳಂದಕೆ ಅಲಂಕಾರದ ಹಂಗಿಲ್ಲ
ಅವಳೀಗ ಸರಳತೆ ಸಹಜತೆ ತುಂಬಿದ
ನಮ್ಮ ಮನೆಯ ಮುದ್ದು ದೇವತೆ
ಹೌದು , ಅವಳು ಶುದ್ಧ ಮುದ್ದು ದೇವತೆ .
ಅದಕ್ಕೆ …,
ನಾನಂತೂ
ಅವಳನ್ನು ಇದ್ದಂತೆ ಪ್ರೀತಿಸುತ್ತೇನೆ
ಮೊದಲಿಗಿಂತ ಜಾಸ್ತಿ ಪ್ರೀತಿಸುತ್ತೇನೆ .
-ಶ್ರೀ ……., ಬೆಂಗಳೂರು
—–