ಅನುದಿನ ಕವನ-೧೨೧೭, ಕವಿ: ವೈ ಬಿ ಹಾಲಬಾವಿ, ಕುಡುತಿನಿ, ಬಳ್ಳಾರಿ, ಕವನದ ಶೀರ್ಷಿಕೆ:ಅವ್ವನಂತ ಮಗಳು…

ಅವ್ವನಂತ ಮಗಳು…

ಮಗುವಾಗಿದ್ದಾಗಿನ ನಗು
ಈಗಲೂ ಹಾಗೆ
ಥೇಟ್ ನನ್ನವ್ವನಂತೆ
ನೇರ ನಡೆ, ನುಡಿ, ಕೋಪ
ಅವಳಂತೆ ಪಡಿಯಚ್ಚು
ನನಗೆ ನೀ ಅಚ್ಚುಮೆಚ್ಚು…

ನೋಡ ನೋಡುತ್ತ
ಬೆಳೆದು ನಿಂತಿರುವೆ ನನ್ನ ಎತ್ತರಕ್ಕೆ
ಮಗುವಾಗಿದ್ದವಳು ಮಾಸಿಲ್ಲ ಆ ನಗುವಿನ್ನೂ
ನೀನೊಂದು ಮಗುವಿಗೆ ತಾಯಿ ಆಗುತ್ತಿರುವೆ
ಓದಿದ್ದು, ಬೆಳೆದದ್ದು, ಕೆಲಸಕ್ಕೆ ತೊಡಗಿದ್ದು
ಎಲ್ಲವೂ ಕನಸೆಂಬಂತೆ ತೋರುತ್ತಿದೆ ನನಗೆ…

ನೀ ಕೂಸಾಗಿದ್ದಾಗ, ಪುಟ್ಟ ಪುಟ್ಟ ಹೆಜ್ಜೆಗಳು
ಕಾಲಿನ ಗೆಜ್ಜೆಯ ಸಪ್ಪಳವಿನ್ನೂ ಈಗಲೂ
ಮಾರ್ದನಿಸುತ್ತಿದೆ ಕಿವಿಯಲ್ಲಿ
ಈಗ ನೀನೊಂದು ಕೂಸಿಗೆ ತಾಯಾಗುತ್ತಿರುವೆ…

ನೀ ಮಗುವಾಗಿದ್ದಾಗಿನ ನೆನಪುಗಳು
ಇನ್ನೂ ಸಮೃದ್ಧವಾಗಿವೆ ನನ್ನಲ್ಲಿ
ನಿನ್ನ ಪುಟ್ಟ ಎಳೆ ಪಾದ ಎದೆ ಮೇಲೆ
ಆಡಿದಂತೆ ಭಾಸವಾಗುತ್ತಿದೆ
ಈಗ ನೀನೊಂದು ಮಗುವಿಗೆ
ಜನ್ಮ ನೀಡುತ್ತಿರುವಾಗ…

ನೀ ಪಡೆದ ಜ್ಞಾನ, ತಿಳುವಳಿಕೆ
ನಿನ್ನ ಮಗುವಿಗೂ ಬರಲಿ ಮಗಳೇ
ನನ್ನ ತಾಯಿಯಂತ ನಿನಗೆ
ನಾನು ಸಹ ಸದಾ ಮಗುವೇ…

ನೂರು ಕಾಲ ಬಾಳು ಮಗಳೇ
ನಿನ್ನ ಮಗುವಿಗೆ ನೀ ಮಗುವಾಗಿ…

-ವೈ ಬಿ ಹಾಲಬಾವಿ, ಕೆಪಿಸಿಎಲ್, ಕುಡುತಿನಿ, ಬಳ್ಳಾರಿ