ಅನುದಿನ ಕವನ-೧೨೧೮, ಕವಿ:ಜನಾರ್ದನ ಕೆಸರುಗದ್ದೆ, ಕವನದ ಶೀರ್ಷಿಕೆ:ಪ್ರೀತಿಯ ಗಾಳಿ ಬೀಸುತಿದೆ..

ಪ್ರೀತಿಯ ಗಾಳಿ ಬೀಸುತಿದೆ..

ಪ್ರೀತಿಯ ಗಾಳಿ ಬೀಸುತಿದೆ
ಹಟ್ಟಿ ಮೊಹಲ್ಲಗಳ ನಡುವೆ
ಗಡಿಗಳ ಮೀರಿ ಗೆಳೆತನವ ಮಾಡೋಣವಾ
ನನ್ನ ಸಂಗಾತಿಯೇ ಓ ನನ್ನ ಸಂಗಾತಿಯೇ

ಸ್ಪೃಶ್ಯ ಅಸ್ಪೃಶ್ಯತೆ ಬೇಲಿಗಳು
ಜಾತಿ ಧರ್ಮದ ಗೋಡೆಗಳು
ಎಲ್ಲವ ದಾಟಿ ಎತ್ತರಕೆ ಹಾರೋಣ ಬಾ
ನನ್ನ ಸಂಗಾತಿಯೇ ಓ ನನ್ನ ಸಂಗಾತಿಯೇ

ಅವ್ವನ ಪ್ರೀತಿಗೆ ಕೈಮುಗಿದು
ಅಪ್ಪನ ಮಮತೆಗೆ ಶರಣೆಂದು
ಹೊಸಿಲ ದಾಟಿ ಬಾ ಹೊಸ ಸಂಬಂಧ ಕಟ್ಟೋಣ ಬಾ
ನನ್ನ ಸಂಗಾತಿಯೇ ಓ ನನ್ನ ಸಂಗಾತಿಯೇ

ನನ್ನ ನಿನ್ನ ಈ ಸ್ನೇಹ
ಒಪ್ಪದಿರಬಹುದು ಸಮಾಜ
ತಪ್ಪೆಂದಾದರೆ ಆಗಲಿ ತಪ್ಪ ಮಾಡೋಣ ಬಾ
ನನ್ನ ಸಂಗಾತಿಯೇ ಓ ನನ್ನ ಸಂಗಾತಿಯೇ

ನೆನ್ನೆಯ ತಪ್ಪು ಇಂದು ಸರಿ
ಇಂದಿನ ತಪ್ಪು ನಾಳೆ ಸರಿ
ಕಾಲದೇಶಕೆ ಬದಲಾಗುವುದು ತಪ್ಪು ಸರಿ
ನನ್ನ ಸಂಗಾತಿಯೇ ಓ ನನ್ನ ಸಂಗಾತಿಯೇ

ಬದಲಾವಣೆಯಲಿ ನೋವು ಇದೆ
ಮೌಲ್ಯಗಳ ಸಂಘರ್ಷವಿದೆ
ಇಂದಲ್ಲ ನಾಳೆ ಬದಲಾಗುವುದು ಜನ ಮನ
ನನ್ನ ಸಂಗಾತಿಯೇ ಓ ನನ್ನ ಸಂಗಾತಿಯೇ

ಬದಲಾಗದಿದ್ದರೆ ನಾವಿಂದು
ಜಗವ ಬದಲಾಯಿಸುವೆವು ಎಂದು
ಬದಲಾವಣೆಯು ಶುರುವಾಗುವುದು ನಮ್ಮಿಂದಲೇ
ನನ್ನ ಸಂಗಾತಿಯೇ ಓ ನನ್ನ ಸಂಗಾತಿಯೇ

-ಜನಾರ್ದನ ಕೆಸರುಗದ್ದೆ