ಅನುದಿನ ಕವನ-೧೨೧೯, ಕವಯಿತ್ರಿ: ಮಧು ಅಕ್ಷರಿ, ಬೆಂಗಳೂರು

ನಡೆದ ಹಾದಿಯಲ್ಲಿ
ಅದೆಷ್ಟು ನಿಲ್ದಾಣಗಳು
ಆಯಾಸ ಹೊರೆ ಹಸಿವು
ಅನುಭವ ಸಂತಸ ಪುಳಕ
ಪಡೆದುದು ಕಳೆದುದು ಎಲ್ಲವೂ
ಇಗೋ ಇವೇ ರಸ್ತೆಗಳಲ್ಲೇ

ಪಯಣ ಆರಂಭವಾದುದು
ಬಹುಶಃ ಕೊನೆಯಾಗುವುದು
ಖಾಲಿ ಕೈಗಳೊಡನೆಯೇ
ನಡುವಲ್ಲಿ ನೂರು ಹೊರೆಯ
ಅನಗತ್ಯ ಭಾರ ಏರಿಕೊಂಡದ್ದೇ
ಹೊರೆಸಿದರೆಂದು ದೂರುತ್ತೇವಷ್ಟೇ

ಆ ಹಾದಿಯ ನಡುಗಂಟ
ಈ ತಿರುವಿನ ಕೊನೆಗಂಟ
ಆ ಏರಿಯ ದಿಣ್ಣೆಯುದ್ದಕ್ಕೆ
ಈ ತಗ್ಗಿನ ತುದಿಯವರೆಗೇ
ಹಲವು ಸಂಬಂಧಗಳು
ಜೊತೆಯಾಗುತ್ತವೆ
ಮರೆಯಾಗುತ್ತವೆ

ಹಾದಿ ಸವೆಯಲೊಂದು ಬಂಧ
ಕಲಿಸಿದ್ದೋ ಕಲೆತದ್ದೋ
ಪ್ರತಿ ಭೇಟಿಗೂ ಕಾರಣವಿದ್ದವಷ್ಟೇ
ಒಂಟಿ ಪಯಣವೆಂಬುದಷ್ಟೇ
ಈ ದಾರಿಯ ವಾಸ್ತವ
ಆದರೂ ಸಹಪಯಾಣಿಕರು‌
ಜೊತೆಯಾಗುತ್ತಾರೆ

ಅಲ್ಲಲ್ಲಿ ಬಿದ್ದ ಜಾಗದಲ್ಲಿ
ಹಳ್ಳಗಳಾಗಿರಬಹುದು
ನಕ್ಕ ಜಾಗದಲ್ಲಿ ಹೇಗೋ
ಮಲ್ಲಿಗೆ ಅರಳಿರಬಹುದು
ತಿರುಗಿ ನಡೆಯುವಂತಿಲ್ಲ
ಹಿಂದಿರುಗಿ ನೋಡಬಹುದಷ್ಟೇ

ಹೆದ್ದಾರಿಯೋ ಕಾಲುದಾರಿಯೋ
ಸರಿ ದಾರಿಯೋ ಅಡ್ಡ ದಾರಿಯೋ
ನಡುರಸ್ತೆಯಲ್ಲಿ ನಿಂತ ಜೀವನ
ಪದೆ ಪದೇ ನಿರ್ಧಾರಕ್ಕೆ ಆಗ್ರಹಿಸುತ್ತದೆ.
ನಮ್ಮದೇ ಆಯ್ಕೆಗಳು
ಪಯಣದ ಗುಣಮಟ್ಟವನ್ನು ನಿರ್ಧರಿಸುತ್ತದೆ

ಆದರೂ ಪ್ರತಿಬಾರಿ ರಸ್ತೆಯೇ
ದೂರಿಗೊಳಗಾಗುತ್ತದೆ
ಅತ್ತ ಹನಿಗಳೆಲ್ಲಾ ಹೊರೆಯಾಗಿ
ಕಾಲೇಳಲೂ ಬಿಡದೆ ತಡೆಹಿಡಿಯುತ್ತವೆ
ನಕ್ಕ ನಗುವೆಲ್ಲಾ ನಕ್ಷತ್ರವಾಗಿ
ದಾರಿಗುಂಟ ಬೆಳಕ ಚೆಲ್ಲುತ್ತವೆ

ಅನುಭವದ ಪಯಣಿಗರ ಮಾತು
ಅಡಿಗಲ್ಲಾಗುತ್ತವೆ
ನಮ್ಮ ಪಾಲಿನ ಹಾದಿ ಇದುವೆ
ಇನ್ನೆಷ್ಟು ದೂರವಿದೆಯೋ..
ಇದೋ ಸೂರ್ಯ ಮೂಡಿದ್ದಾನೆ.


-ಮಧು ಅಕ್ಷರಿ, ಬೆಂಗಳೂರು