ಅನುದಿನ‌ ಕವನ-೧೨೨೪, ಹಿರಿಯ ಕವಯಿತ್ರಿ: ಎಂ. ಆರ್. ಕಮಲಾ, ಬೆಂಗಳೂರು, ಕವನದ ಶೀರ್ಷಿಕೆ: ಕವಿತೆಯಾಗಿಬಿಡಿ!

ಕವಿತೆಯಾಗಿಬಿಡಿ!

ಪ್ರೀತಿ  ಸಾರಲು ಸಾವಿರ ದಾರಿಗಳಿವೆ
ಎದುರುಗೊಳ್ಳುವುದಕ್ಕೆ ಸಿದ್ಧರಾಗಿ ಸಾಕು

ಗಾಳಿ ಮರಗಳ ವೀಣೆ ನುಡಿಸುತ್ತೆ
ಮೌನವಾಗಿ, ತಾನಕ್ಕೆ ಮುದಗೊಳ್ಳಿ
ಗಾಳಿ ಗೀಳು, ಗಾಳಿ ಗೋಳು ಪದಗಳ
ಕಿತ್ತೆಸೆದು ಹಾಗೇ ಕಿವಿಯೊಡ್ಡಿಕೊಳ್ಳಿ

ಪ್ರೀತಿ ಸಾರಲು ಸಾವಿರ ದಾರಿಗಳಿವೆ
ಎದುರುಗೊಳ್ಳುವುದಕ್ಕೆ ಸಿದ್ಧರಾಗಿ ಸಾಕು

ಸಂಗೀತಕ್ಕೆ ಹಾಳು ಮಡಿವಂತಿಕೆಯಿಲ್ಲ
ಅಲೆಯಾಗಿ ಸುಮ್ಮನೆ ತೇಲುತ್ತದೆ
ರಾಗಗಳ ಹಕ್ಕಿ ಹೊತ್ತು  ತರುತ್ತದೆ
ಸರಾಗವಾಗಿ ಮನಸು ತೆರೆದುಕೊಳ್ಳಿ

ಪ್ರೀತಿ ಸಾರಲು ಸಾವಿರ ದಾರಿಗಳಿವೆ
ಎದುರುಗೊಳ್ಳುವುದಕ್ಕೆ ಸಿದ್ಧರಾಗಿ ಸಾಕು

ಹಲಗೆ ಬಳಪದ ಹಂಗಿಲ್ಲದ ಕವಿತೆ
ಹೂವಾಗಿ ಗಿಡ ಮರದಲ್ಲಿ ತೂಗುತ್ತದೆ
ಕಂಪು, ಇಂಪು ಜೊಂಪೆಯಾಗಿದೆ
ಮೂಗರಳಿಸಿ ಹೀರಿ, ಕವಿತೆಯಾಗಿಬಿಡಿ!

-ಎಂ.ಆರ್. ಕಮಲ, ಬೆಂಗಳೂರು
—–