ಕಲ್ಯಾಣ ಪ್ರಣತಿ
ಕಲ್ಯಾಣ ಪ್ರಣತ್ಯಾಗ ಅರಿವಿನ ದೀವಿಗೆ
ಕಾಯಕ ತುಂಬಾ ಕೈಲಾಸ / ಬಸವಣ್ಣ
ಜಗದೊಳು ಜ್ಯೋತಿ ಬೆಳಿಗ್ಯಾನ -೧-
ಮನುಕುಲಕ್ಕಂಟಿದ ಮೈಲಿಗೆ ಕಿತ್ತೊಗೆದು
ಸಮಾನತೆ ತತ್ವ ಸಾರ್ಯಾನ / ಬಸವಣ್ಣ
ಮೌಢ್ಯಕ್ಕೆ ಮೂಟೆ ಕಟ್ಯಾನ -೨-
ಜಾತಿಯ ಜಾಲಾಡಿ ನೀತಿಗೆ ಬೆಳಕಾಗಿ
ಒಂದೆಂಬ ತತ್ವಕ್ಕೆ ಬದ್ಧಾಗಿ / ಬಸವಣ್ಣ
ಜಗದ ಜ್ಯೋತಿಯಾಗಿ ಮೆರೆದಾನ -೩-
ಮನುಕುಲ ಒಂದು ಮಾಡಲು ಹೊರಟಾನ
ಜಾತಿಯ ಜೇಡ ಬಿಡಿಶ್ಯಾನ / ಬಸವಣ್ಣ
ಕ್ರಾಂತಿಯ ಕಿಡಿ ಹಚ್ಯಾನ -೪-
ಕುಲಕೊಬ್ಬ ಶರಣನಿಗೆ ಕೈಮಾಡಿ ಕರೆದಾನ
ಅನುಭವ ಮಂಟಪ ಕಟ್ಯಾನ / ಬಸವಣ್ಣ
ಅಲ್ಲಮನ ದೊರೆ ಮಾಡ್ಯಾನ – ೫-
ಅರಸನ ಅರಮನೆಯೊಳು ಭಕ್ತಿ ಭಂಡಾರಿ
ಇರ್ವ ಮಡಿದಿಯರ ಜೊತೆಗೂಡಿ / ಬಸವಣ್ಣ
ಕಾಯಕದಿ ಕೈಲಾಸ ಕಂಡಾನ – ೬-
ಪ್ರೀತಿಯ ಒಳಗಿನ ಜಾತಿಯ ಕಿತ್ತೊಗೆದು
ಮೂಢರ ದೃಷ್ಟಿಗೆ ಗುರಿಯಾಗಿ / ಬಸವಣ್ಣ
ಕೂಡಲ ಸಂಗಮನ ಕೂಡ್ಯಾನ- ೭ –
ಕೆಟ್ಟ ಕಲ್ಯಾಣದಾಗ ಕಣ್ಣೀರು ಕೊಡ್ಯಾಗಿ
ಬಸವನ ಬಳಗ ಬೋರಾಡಿ / ಬಸವಣ್ಣ
ಮನುಕುಲಕ ಮದ್ದು ನೀಡ್ಯಾನ – ೮ –
ಜಗದಗಲ ಮುಗಿಲಗಲ ಬಸವನ ಕಿರುತಿ
ಅರಿವಿನ ಬೆಳಕು ನಾಡೊಳಗೆ / ಬಸವಣ್ಣ
ಜ್ಞಾನದ ಕಿರಣ ಬಿರ್ಯಾನ – ೯ –
ಎಷ್ಟು ಹೇಳಿದರೇನು ವಚನ ಕೊಟ್ಟರೇನು
ತಿಳಿಗೇಡಿ ಮಂದಿಗೆ ತಿಳಿವಲದು / ಬಸವಣ್ಣ
ಮತ್ತೊಮ್ಮೆ ಬಾರೋ ನಮ್ಮೂರಿಗೆ – ೧೦-
-ಡಾ. ಗೋವಿಂದರಾಜ ಆಲ್ದಾಳ