ಅನುದಿನ ಕವನ-೧೨೨೭, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಝಲ್

ಗಝಲ್

ಎಷ್ಟು ಪ್ರೀತಿ ಕೊಟ್ಟರೂ ಮೌನವಾಗಿ ಇರಿಯುವ ಮನಸುಗಳಿವೆ ಇಲ್ಲಿ
ಬಟ್ಟೆ ಕಳಚಿದಂತೆ ಬಣ್ಣ ಒರೆಸಿಕೊಂಡಂತೆ ಬಳಸಿ ಬಿಸಾಡುವ ಮನಗಳಿವೆ ಇಲ್ಲಿ

ಒಲಿದ ಜೀವವೂ ಒಮ್ಮೊಮ್ಮೆ ಒಂಟಿಯಾಗಿಸಿ ಮೋಜು ನೋಡುವುದು
ಭಾವನೆಗಳ ಜೊತೆ ಚೆಲ್ಲಾಟವಾಡಿ ಚುಚ್ಚುವ ಮನಗಳಿವೆ ಇಲ್ಲಿ

ಕಟ್ಟಿಕೊಂಡ ಕನಸುಗಳೆಲ್ಲ ಬಿಕರಿಯಾಗಿ ಖಾಲಿಯಾಗಿದೆ ಎದೆ
ಹದನಾಗಿ ತುಳಿದು ಮೆತ್ತಗಾಗಿಸಿ ಮೌನವಾಗುಳಿವ ಮನಸುಗಳಿವೆ ಇಲ್ಲಿ

ನೋವುಗಳೇ ಮಡುಗಟ್ಟಿ ಕಣ್ಣೀರಾಗಿ ಕೆನ್ನೆಗಿಳಿದರೂ ಕರುಣೆಯಿಲ್ಲ
ಕಟುಕರಂತೆ ಕುಟುಕುತ್ತಾ ದೊಡ್ಡ ನಗೆ ಚೆಲ್ಲುವ ಮನಸುಗಳಿವೆ ಇಲ್ಲಿ

ಮಾತು ಹೊರಡದ ಈ ವಿಷಮ ಘಳಿಗೆಯಲ್ಲಿ ಸೂತಕ ಕವಿದರೂ
ಕುಣಿದು ವಿಜೃಂಭಿಸಿ ಕೇಕೆ ಹಾಕುವ ವಿಕೃತ ಮನಸುಗಳಿವೆ ಇಲ್ಲಿ


-ನಾಗೇಶ್ ಜೆ. ನಾಯಕ, ಸವದತ್ತಿ
—–