ಕಾವ್ಯ ಕಹಳೆ(೧೨-೦೫-೨೦೨೪), ಕವಯಿತ್ರಿ:ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ವ್ಯಾಖ್ಯೆ ಉಂಟೆ

ವಿಶ್ವ ಅಮ್ಮಂದಿರ ದಿನಾಚರಣೆಯ ಶುಭಾಶಯಗಳು🍀🌺🍀💐

ವ್ಯಾಖ್ಯೆ ಉಂಟೆ

ವ್ಯಾಖ್ಯೆಯ ಹಂಗಿಲ್ಲದ ಅಂಕೆಯಿಲ್ಲದ
ಹೇಳಿ ಅರ್ಥೈಸಲಾಗದ ವ್ಯರ್ಥ ಪ್ರಯತ್ನದ ಶಬ್ದ, ತಾಯಿ
ತಿಳಿಯಲಾರದ ಆಳದ, ಅಂತ ಕಾಣದ ಹೃದಯ
ಒಣ ಮಾತುಗಳ ಜಡತೆಯಿರದ ಚೇತನ
ಅದನ ಎಲ್ಲಿ ಹೇಗೆ ಹಿಡಿದಿಡುವಿ ಹೇಳು
ಯೋಚಿಸು ಉಂಟೇ ಆ ಶಕ್ತಿ ನಿನ್ನ ಶಬ್ದಗಳಿಗೆ

ಬಿದ್ದಾಗ ಅತ್ತಾಗ, ಹಸಿದಾಗ, ನೊಂದಾಗಲಷ್ಟೇ ಅಲ್ಲವೇ ಅಲ್ಲ
ಅನುಕ್ಷಣ ನಿನ್ನೆದೆಯ ಬಡಿತ ಆಲಿಸುತ್ತಿರುವ
ಗಳಿಗೆ ಗಳಿಗೆ ನಿನ್ನ ನೆರಳಾಗಿರುವ ನೀನೇ ತಾನಾಗಿರುವ
ತನ್ನತನವನ್ನೆಲ್ಲ ಧಾರೆಯೆರೆದು ತನ್ನಿರುವ ಮರೆತಿರುವ
ಆ ಅವಳನ್ನ ಎಲ್ಲಿ ಹೇಗೆ ಹಿಡಿದಿಡುವಿ ಹೇಳು
ಯೋಚಿಸು ಉಂಟೇ ಆ ಶಕ್ತಿ ನಿನ್ನ ಶಬ್ದಗಳಿಗೆ

ಎದೆಯುದ್ದ ಬೆಳೆದು ನಿಂತ ಕಂದನ ದಿನವೆಂದು
ಒಮ್ಮೆಯೂ ಎಣಿಸದ, ದಿನವೂ ಹೊಸ ದಿನ
ಹೊಸ ಆಸೆ ಕನಸು ಹುರುಪಿನ ದಿನ ಕಂದನದು
ಒಂದು ದಿನದ ಆಚರಣೆ ಅಲ್ಲ ಅನುಗಾಲವದು
ಎಂದೆಣಿಸಿ ಸುಖಿಸುವ ಹಿತ ಕಾಯುವ
ಅಸಹಾಯಕ ಸಿಟ್ಟಿನಲ್ಲೂ ಒಲವೇ ಕಾಂಬ
ಆ ಅವಳನ್ನು ಎಲ್ಲಿ ಹೇಗೆ ಹಿಡಿದಿಡುವಿ ಹೇಳು
ಯೋಚಿಸು ಉಂಟೇ ಆ ಶಕ್ತಿ ನಿನ್ನ ಶಬ್ದಗಳಿಗೆ

ಮಾಗಿ ಬಾಗಿದರೂ ಬಾಗದ ಮಮತೆಯ ವೃಕ್ಷ
ಕಂದನ ಮುಜುಗರ, ಕಾಣದ ಕೋಪದಲೂ ನಗು
ನಡುಗುವ ತನುವಿಗೆ ನೀಡಿದ ಆಸರೆ ಬಲು ಭಾರವೆನಿಸಿ
ಕಂದ ನೊಂದಾನು ಗಟ್ಟಿಯಾಗು ಎಲೆ ಜೀವವೇ
ಗಟ್ಟಿಯಾಗೆನುತ ಒಲವನೆಳೆಯ ಅರಸುವ ಮಂಜುಗಣ್ಣಗಳ
ಆ ಅವಳನ್ನು ಎಲ್ಲಿ ಹೇಗೆ ಹಿಡಿದಿಡುವಿ ಹೇಳು
ಯೋಚಿಸು ಉಂಟೇ ಆ ಶಕ್ತಿ ನಿನ್ನ ಶಬ್ದಗಳಿಗೆ
ಉಂಟೆ ಆ ಸಶಕ್ತ ಲೇಖನಿ ಬರೆಯಲು ಆ ಶಬ್ದಗಳ
ನೀಡಬಲ್ಲೆಯಾ ವ್ಯಾಖ್ಯೆ ಆ ಶಬ್ದ’ ತಾಯಿ’ ಗೆ

-ಸರೋಜಿನಿ ಪಡಸಲಗಿ
ಬೆಂಗಳೂರು