ಬಳ್ಳಾರಿ: ವಿಜಯ ಕರ್ನಾಟಕ ಉಪಸಂಪಾದಕ ವೀರೇಶ್ ಕಟ್ಟೆಮ್ಯಾಗಳ ವಿಧಿವಶ

ಬಳ್ಳಾರಿ, ಮೇ 12: ನಗರದ ವಿಜಯ ಕರ್ನಾಟಕ ಕಚೇರಿಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ವೀರೇಶ್ ಕಟ್ಟೆಮ್ಯಾಗಳ(42) ಅವರು ಹೃದಯಾಘಾತದಿಂದ ಭಾನುವಾರ ಸಂಜೆ ಜಿಲ್ಲಾ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಶನಿವಾರ ರಾತ್ರಿ ಎಂದಿನಂತೆ ತಮ್ಮ ಕರ್ತವ್ಯ ಮುಗಿಸಿ ಮನೆಗೆ ಹೋಗುವ ಸಂದರ್ಭದಲ್ಲಿ ಹೃದಯಾಘಾತವಾಗಿದೆ. ತಕ್ಷಣ ಸಹೋದ್ಯೋಗಿಗಳು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಂಜೆ ವಿರೇಶ್ ವಿಧಿವಶರಾದರು.
ಸುದ್ದಿಮೂಲ ವರದಿಗಾರರಾಗಿ ಪತ್ರಿಕಾ ಸೇವೆ ಆರಂಭಿಸಿದ್ದ ವೀರೇಶ್ ಅವರು ಪ್ರಜಾವಾಣಿ ಬಳ್ಳಾರಿ ಜಿಲ್ಲಾ ಕಚೇರಿಯಲ್ಲಿ ಅರೆಕಾಲಿಕ ವರದಿಗಾರರಾಗಿ ಹಾಗೂ ಈನಾಡು ಇಂಡಿಯಾದ ಸಂಸ್ಥೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು.
ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಟಿ. ರಾಂಪುರ ಗ್ರಾಮದ ವೀರೇಶ್ ಬಳ್ಳಾರಿ ಸಮೀಪದ ಬೇವಿನಹಳ್ಳಿ ಗ್ರಾಮದಲ್ಲಿ ‌ವಿವಾಹವಾಗಿದ್ದರು.
ಕಂಬನಿ: ಸರಳ ಸಜ್ಜನಿಕೆಯ ವೀರೇಶ್ ಅವರ ಅಕಾಲಿಕ ನಿಧನಕ್ಕೆ ಜಿಲ್ಲೆಯ ಪತ್ರಿಕಾರಂಗ ಕಂಬನಿ‌ ಮಿಡಿದಿದೆ.
—–