ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತ್ರಿ ಪುರಸ್ಕೃತ ಯುವಕವಿ, ಸಂಶೋಧಕ, ಅನುವಾದಕ ಸಾಹಿತಿ “ಲಕ್ಕೂರು ಸಿ. ಆನಂದ” ಭಾನುವಾರ ರಾತ್ರಿ ಕಲಬುರಗಿ ಸೆಂಟ್ರಲ್ ಯೂನಿವರ್ಸಿಟಿಯ ಕಡಗಂಚಿ ಗ್ರಾಮದಲ್ಲಿ ನಿಧನರಾಗಿದ್ದಾರೆ. ಆನಂದ ಲಕ್ಕೂರ ಅವರ ‘ಒಂದು ಕಪ್ ಕಾಫಿ’ ಜನಪ್ರಿಯ ಕವಿತೆ ಪ್ರಕಟಿಸುವ ಮೂಲಕ ಕರ್ನಾಟಕ ಕಹಳೆ ಡಾಟ್ ಕಾಮ್ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿದೆ.
ಒಂದು ಕಪ್ ಕಾಫಿ
ಕೊನೆಯ ಸಾರಿ
ನನ್ನ ಜೊತೆ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ನಾನು ತಪ್ಪು ಮಾಡಿದೆನೊ,
ನೀನು ತಪ್ಪು ಮಾಡಿದೆಯೊ,
ಬಿಟ್ಟು ಬಿಡೋಣ:
ಕೊನೆಯ ಸಾರಿ
ನನ್ನ ಜೊತೆ ಒಂದೇ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ಈ ಗಳಿಗೆಯನ್ನು ಚಿರಸ್ಮರಣೀಯ ಮಾಡುತ್ತೇನೆ
ಯಾರಿಗೆ ಗೊತ್ತು?
ಅದು ಇಲ್ಲೇ ತಿರುವು ಪಡೆಯಬಹುದು!
ಇಲ್ಲ ನಾವಿಬ್ಬರು ಬೇರೆಯಾಗಬಹುದು!
ಯಾರು ಊಹಿಸಿರುತ್ತಾರೆ?
ನಾನೊಂದು ಹೇಳುವುದು
ನೀನೊಂದು ಹೇಳುವುದು
ಮಾತುಗಳೆಂಬ ಟಗರುಗಳು ಗುದ್ದಾಡುತ್ತಿವೆ
ನಮಗಿರುವ ಎಲ್ಲಾ ಮಾತಿನ ದಾರಿಗಳಲ್ಲೂ
ದುಃಖ ಹೆಪ್ಪುಗಟ್ಟಿ ಕುಳಿತುಬಿಟ್ಟಿದೆ
ಯಾರಿಗೆ ಗೊತ್ತು
ನಮ್ಮೆದುರಿಗೆ ವಿಶಾಲ ವನಗಳಿರಬಹುದು
ದ್ರಾಕ್ಷಿ ಹಣ್ಣುಗಳು ಭಾರ ತಡೆಯಲಾರದೆ
ನೆಲಕ್ಕೆ ಬಾಗಿದ ಮೋಡಗಳಾಗಬಹುದು
ಅಪರೂಪದ ನದಿಗಳೂ ಕೂಡ ನಮ್ಮ ಸುತ್ತ ಪರಿಭ್ರಮಿಸಬಹುದು,
ಆದರೆ ಏನು ಲಾಭ?
ನಮ್ಮಿಬ್ಬರಿಗೂ ದಾಹವಾಗುತ್ತಿಲ್ಲಾ
ಇಬ್ಬರ ಗುಂಡಿಗೆಯ ಮೂಲೆಯಲ್ಲೂ
ಸಣ್ಣ ಕೊಂಬೆಯೊಂದು ಮುರಿದು ಬೀಳುವ ಶಬ್ದ
ದುಃಖದ ಹನಿಗಳು ಸುರಿಯುತ್ತಿರುವ ಶಬ್ದ
ಅವರವರದು ಅವರವರಿಗೆ ಹೊರಲಾರದ ಭಾರವಾಗುತ್ತಿದೆ
ದ್ವೇಷವಿಲ್ಲ, ಅಸೂಯೆಯಿಲ್ಲ, ಕೋಪವಿಲ್ಲ;
ಅಲ್ಲಿರುವುದು ಬರೀ ಪ್ರೀತಿಯೇ
ಆದರೂ ಕರುಣೆಯೆಂಬುದು ಇಷ್ಟೊಂದು ಕ್ರೂರವಾಗಿರುತ್ತಾ?
ಈಗಲೂ ಕೂಡಾ
ನಿನ್ನ ಕಣ್ಣಲ್ಲೊಂದು ದಯೆ ಕದಲಾಡುತ್ತಿದೆ
ಅದು ನಿನಗೂ ನನಗೂ ಕೂಡಾ ಅರ್ಥವಾಗುತ್ತಿಲ್ಲ
ಹತಾಶೆಯ ಪೊರೆ ಕಣ್ಣಿಂದ ಕಳಚುವವರೆಗೆ
ನಾವಿಬ್ಬರೂ ಕಾಯಬೇಕಷ್ಟೆ!
ನನ್ನ ಕಣ್ಣಿಗೀಗ ನೀನು ಎಟುಕುತ್ತಿಲ್ಲ
ನಿನ್ನ ಕಣ್ಣಿಗೀಗ ನಾನೂ ಎಟುಕುತ್ತಿಲ್ಲ
ಈ ಹಿಂದಿನ ಕನಸುಗಳೆಲ್ಲಾ ಇಬ್ಬರಲ್ಲೂ ಕರಗಿಹೋಗಿವೆ
ರೆಕ್ಕೆಮುರಿದ ಹಕ್ಕಿಗಳೆರೆಡು
ತಲಾ ಒಬೊಬ್ಬರ ತಲೆಯ ಮೇಲೆ ಬಂದು ಕೂತು ಬಿಟ್ಟಿವೆ
ಬಹುಶಃ ಇದು ಕೊನೆಯ ಸಾರಿಯ ಭೇಟಿಯಾಗಬಹುದು!
ನಾವಿಬ್ಬರು ಇಷ್ಟು ಹತ್ತಿರದಲ್ಲಿ ಕಾಫಿ ಕುಡಿಯುವುದು?
ನೆನ್ನೆಗಳೆಲ್ಲಾ ಇಂದು ದೀರ್ಘ ನಿಟ್ಟುಸಿರುಗಳಾಗುತ್ತಿವೆ
ನಿನ್ನೊಳಗೆ ಕದಲಾಡುತ್ತಿರುವ ಗೊಂದಲವೊಂದು
ಮೆತ್ತಗೆ ನನ್ನನ್ನು ತಾಕುತ್ತಿದೆ
ನಾವಿಬ್ಬರು ಇಷ್ಟು ನಿಶಬ್ದವಾಗಿ ಕಾಫಿ ಕುಡಿಯಬೇಕಾ?
ಶವಯಾತ್ರೆಯೂ ಕೂಡಾ
ಇಷ್ಟು ನಿಶಬ್ದವಾಗಿರುವುದಿಲ್ಲ!
ಇದು ನಮ್ಮಿಬ್ಬರ ಕೊನೆಯ ಭೇಟಿ
ಕೊನೆಯ ಸಾರಿಯ ನೆನಪಿಗೆ ತಲಾ ಒಂದೊಂದು ಕಾಫಿ ಕಫ್,
ಈ ಹಿಂದೆ ಇವೇ ಒನ್ ಬೈ ಟೂಗಳು,
ಅವೇ ಈಗ ಎರಡು ಅನಾಮಿಕ ಕಾಫೀ ಕಪ್ಗಳು
ಈ ಕಾಫಿ ಕಪ್ನೊಳಗೆ ಇಣುಕಿ ನೋಡಿದರೆ
ನೆನ್ನೆಯೆಂಬ ಚೂರು,
ನಮ್ಮಿಬ್ಬರ ಪರಿಚಯಗಳು
ಎರಡು ಬೇರೆ ಬೇರೆ ಬೊಂಬೆಗಳಂತೆ ಕಚ್ಚಾಡುತ್ತಿವೆ
– ಲಕ್ಕೂರು ಆನಂದ್, ಕೋಲಾರ
—–