ಗುಲ್ಮೊಹರ್…
ವಿಚಿತ್ರ ಆಕರ್ಷಣೆಯೇ ಹೌದು ಅದೊಂದೇ ಭಿಕಾರಿ ಹೂವಿನ ಮೇಲೆ.
ವಿಕಾರವಾದರು ಅಮಲೆ ಮಾರಿ ಕೆಂಡದುಂಡೆ ಮೇಲಿನ ನಡಿಗೆ.
ಚಂದವಿಲ್ಲ ಅಂದವಿಲ್ಲ
ದುಂಡು ದಂಡು ಅಳತೆಯಿಲ್ಲ
ವಕ್ರ ಚಕ್ರ ರೂಪುಯಿಲ್ಲ
ಹಿಡಿದು ಮುಡಿಯೆ ಒಗೆತವಿಲ್ಲ
ಬಣ್ಣದೊಂದು ಕುಣಿತ
ಎತ್ತರದಲಿ ಗೋಧೂಳಿ ಮಿಂಚ ಸೆಳೆತ.
ನವುರುಗೆಂಪು ನಾಕು ಪಕಳೆ ಅವಳ ಜಡೆಯ ತುದಿಯ ಕುಚ್ಚು
ಹೂವ ಒನಪು ಮೊಡವೆ ಬರದ ಕೋಮಲ ಕೆನ್ನೆನುಣುಪು
ಶಲಾಕೆ ಕೊಂಡಿ ಮೊನೆ ಮಾಟ ಹೂವ ನಡುವೆ
ಗೊದ್ದಗಳ ಕಾವಲಿನೋಟ ಅಲ್ಲೆ ಬುಡದ ಬೇರಿಗೆ.
ಶಾಪಗ್ರಸ್ತ ಗಂಧರ್ವ ಕನ್ನೆ ಹೃದಯ ಶೋಕ ಹೂವಾಗಿ ನಗುತಿದೆ.
ಧರಣಿಯ ತಿಂಗಳ ಋತುಗೀತೆ ಜೀವಚೇತನದ ಮೊಳಕೆಗೆ ಹಂಬಲಿಸುತಿದೆ.
ಮೇಘ ಮಳೆ ಬೀಜ ಬಿರಿದು ನವ ಸಂವತ್ಸರ ತೊಟ್ಟಿಲ ಕೂಸ ತೂಗುತಿದೆ.
ರಕ್ತ ಬಸಿದ ಯುದ್ಧಗಳ ಶಸ್ತ್ರಗಳೆಲ್ಲ ಒಗ್ಗೂಡಿ ಕಾಲನ ಕರೆಗೆ ಕಾಯುತಿವೆ.
ಪೂಜೆಗಿಲ್ಲ ಮೇಳಕಿಲ್ಲ ಮನೆ ಹಂದರಕೆ ಮಾತ್ರ ಒಗ್ಗಿದೆಯಲ್ಲ.
ದೇವಗಿಲ್ಲ ದೇವಿಗಿಲ್ಲ ಗುಡಿ ಚಪ್ಪರದೆ ಕಣ್ಣಿರ ಸುರಿದೆಯಲ್ಲ.
ನಿನ್ನ ಭೀಕರ ನಗು ಕೇಕೆಯಲು ಎಂತ ಮೃದು ಮಧುರ ಆಲಾಪವಿದೆಯೊ
ನಿನ್ನ ಭೀಭತ್ಸ ಗ್ರಹಣವಿಡಿದ ರಂಗಲು ಎಂತ ಚೆಲುವ ನೋಟವಿದೆಯೊ.
ಹೆಪ್ಪುಗಟ್ಟಿದೆ ಯುಗಮಾನದ ಎಲ್ಲ ಪಾಪದೋಕುಳಿ ಹೂವಿನಂದದಲಿ.
ನರಳುತಿದೆ ಅರೆಬೆಳೆದ ಭ್ರೂಣ ಭೂಮಿಯೊಡಲ ಗುಲ್ಮೊಹರಿನಲಿ.!
-ಟಿಪಿ.ಉಮೇಶ್, ಹೊಳಲ್ಕೆರೆ, ಚಿತ್ರದುರ್ಗ ಜಿ.