ಅನುದಿನ ಕವನ-೧೨೪೧, ಕವಿ: ಲಕ್ಷ್ಮಿಕಾಂತ ಮಿರಜಕರ .ಶಿಗ್ಗಾಂವ, ಕಾವ್ಯ ಪ್ರಕಾರ: ಗಜಲ್

ಗಜಲ್

ಮನಸು ಮಾರಿಕೊಂಡು ಉಘೇ ಎನ್ನುವ ಭಕ್ತರಿರುವಾಗ ನಾನೇಕೆ ಹೆದರಲಿ
ತಪ್ಪು ಮಾಡಿದರೂ ಜೈ ಎನ್ನಲು ಭಕ್ತರಿರುವಾಗ ನಾನೇಕೆ ಹೆದರಲಿ

ಹುಸಿ ಭ್ರಮೆಗಳ ಉನ್ಮಾದ ತೇಲಿಸುವ ಮಾರಕ ಅಮಲಿನಂತೆ ನಾನು
ಹಸಿಹಸಿ ಸುಳ್ಳು ಹೇಳಿದರೂ ನಂಬಿ ಕುಣಿಯುವ ಭಕ್ತರಿರುವಾಗ ನಾನೇಕೆ ಹೆದರಲಿ

ಗರೀಬರ ಬದುಕು ಅಧೋಗತಿಗೆ ಬಂದು ಕರಾಳ ಸ್ಥಿತಿ ಎಂದರೂ
ಪೆದ್ದು ಕುರಿಗಳಂತೆ ಧ್ವನಿಗೂಡಿಸುವ ಭಕ್ತರಿರುವಾಗ ನಾನೇಕೆ ಹೆದರಲಿ

ನನ್ನ ಬಂಡವಾಳ ಇಷ್ಟೇ ಎಂದು ನಿಜವೇಷ ಕಳಚಿ ತೋರಿಸುತ್ತಿದ್ದರೂ
ದೇವನಂತೆ ಪೂಜಿಸಿ ಮೈಮರೆಯುವ ಭಕ್ತರಿರುವಾಗ ನಾನೇಕೆ ಹೆದರಲಿ

“ಕಾಂತ” ಪರೋಕ್ಷವಾಗಿ ಸರ್ವಾಧಿಕಾರ ತೋರಿಸಿದರೂ ಸುಮ್ಮನಿರುತ್ತಾರೆ
ವಿಫಲತೆಯ ಪ್ರಶ್ನಿಸದೆ ಕೈಜೋಡಿಸಿ ನಿಲ್ಲುವ ಭಕ್ತರಿರುವಾಗ ನಾನೇಕೆ ಹೆದರಲಿ


-ಲಕ್ಷ್ಮಿಕಾಂತ ಮಿರಜಕರ .ಶಿಗ್ಗಾಂವ.
—–