ನಿನ್ನಂತೆತೆಯೇ ಥೇಟ್ ನಿನ್ನಂತೆಯೇ
ಹಾಗೇ ಸುಮ್ಮನೆ ಅವುಚಿ ಕುಳಿತ ಕವಿತೆ
ಕಿಸಕ್ಕೆಂದಿತು ಕಣ್ಣು ಮಿಟುಕಿಸಿ ಕೊಂಕಿಸಿ
ಮೆಲುದನೀಲಿ ಉಸುರಿತು ನಾ ಬಲು ನಿಗೂಢ
ನಿನ್ನಂತೆಯೇ ಥೇಟ್ ನಿನ್ನಂತೆಯೇ
ಏನೋ ಆಗ ಮಿಂಚಿತ್ತು ಮಿಣುಕುತ್ತಿತ್ತು
ಸುತ್ತ ಇಣುಕುತಿತ್ತು ಕೈಗೆ ಸಿಗದೇ ಓಡುತಿತ್ತು
ತುಂಟ ಮಗುವಿನಂತೆ ಜಿಗಿದು ಆಡುತಿತ್ತು
ಆಳ ಸುಳಿಯಲಿ ಗಿರಕಿ ಹೊಡೆಯುತಿತ್ತು
ಎನ್ನುತಿತ್ತು ನಿನ್ನಂತೆಯೇ ಥೇಟ್ ನಿನ್ನಂತೆಯೇ
ಗೊಂದಲದ ಸಂತೆಯಲ್ಲಿ ತಪ್ಪಿಸಿಕೊಂಡು
ನುಣುಚಿ ಜಾರಿ ತೂಗುಮಣೆ ಏರಿ ಜೀಕಿ
ಭಾವನೆಗಳ ತೋಟದಿ ಕಣ್ಣುಮುಚ್ಚಾಲೆಯಾಡಿ
ಆಳ ಸುಳಿಯಲಿ ಗಿರಕಿ ಹೊಡೆಯುತಿತ್ತು
ಎನ್ನುತಿತ್ತು ನಿನ್ನಂತೆಯೇ ಥೇಟ್ ನಿನ್ನಂತೆಯೇ
ಥಟ್ಟನೆ ತುಟಿಯಂಚಲಿ ನಗು ಅರಳಿಸಿ
ನೇರ ಎದೆಯ ಗೂಡಿಗೆ ಇಟ್ಟು ಲಗ್ಗೆ
ಕುಪ್ಪಳಿಸುತ ಕವಿತೆ ಗರಿಗೆದರಿದ ಭಾವಗಳಿಗೆ
ತಾನೇ ಮುಕುಟವಾಗಿ ಗೂಢತೆಯಲಿ ತೇಲಿ
ಎನ್ನುತಿತ್ತು ನಿನ್ನಂತೆಯೇ ಥೇಟ್ ನಿನ್ನಂತೆಯೇ
ಮನದಾಳದಲ್ಲಿ ವಿಚಿತ್ರ ತಾಕಲಾಟ ಹೋರಾಟ
ಕಣ್ಣಲಿಣುಕಿ ಇನಿತು ನಕ್ಕು ಹೇಳಿತಾಗ ಕವಿತೆ
ನಿನ್ನ ಭಾವನೆಗಳ ಕೂಸು ನಾ ಇರುವೆ ನಿನ್ನಂತೆಯೇ
ನೀ ಸ್ವತಂತ್ರ ತೊಡಿಸು ನಿನ್ನಿಷ್ಟದ ತೊಡಿಗೆ
ಆದರೂ ಬಹಿರಂಗದಲಿ ನಾ ಬಲು ನಿಗೂಢ
ಗೊತ್ತೆ ನಿನ್ನಂತೆಯೇ ಥೇಟ್ ನಿನ್ನಂತೆಯೆ
-ಸರೋಜಿನಿ ಪಡಸಲಗಿ
ಬೆಂಗಳೂರು
*****
ಕವಿಯನ್ನು ಅಣಕಿಸುವ ಕವಿತೆ ಸಹ ಥೇಟ್ ಕವಿಯಂತೆಯೇ- ಬಹಿರಂಗದಲ್ಲಿ ಕಾಣದಿದ್ದರೂ! ಢಾಲಾಗಿ ಅಷ್ಟು ಸ್ಪಷ್ಟಪಡಿಸಿದರೂ ನಿಗೂಢ! ಪದಗಳ ಚಮತ್ಕಾರ, ಅವುಗಳನು ಹೆಣೆದ ರೀತಿ ಇಷ್ಟವಾಯಿತು.