ನಿಮಗೊಂದು ಗುಟ್ಟು ಹೇಳುವೆ
ನಿಮ್ಮಲ್ಲೇ ಇರಲಿ..
ಸೊಂಟದ ತಿರುವಲ್ಲಿ
ಅವಳು ಕಚಗುಳಿ
ಇಟ್ಟುಕೊಂಡಿದ್ದಾಳೆ
ಅಕಸ್ಮಾತ್ ಮುಟ್ಟಿದರೆ
ಸಿಟ್ಟಿನ ಮುಖವಾಡ ಹಾಕುತ್ತಾಳೆ
ಅದ್ಯಾಕೆ ಆ ಕಚಗುಳಿಯನ್ನು
ಹಾಗೆ ಬಂದಿಸಿದ್ದಾಳೋ…
ನಿಮ್ಮಲ್ಲೇ ಇರಲಿ
ಒಂದಷ್ಟು ಮಾತಿನ ನಂತರ
ಅಪ್ಪಿತಪ್ಪಿ ಸ್ಪರ್ಶಕ್ಕೆ
ಅವಕಾಶವಾಯಿತಾದರೆ
ಅವಳ ತೋಳು, ಕೈಗಳ
ರೋಮರಂದ್ರಗಳಲ್ಲಿ
ಗುಳ್ಳೆಗಳೇಳುತ್ತವೆ
ಅದು ರೋಮಾಂಚನಕ್ಕಲ್ಲದೇ
ಮತ್ತೇನು..?
ನನಗೆ ಮೈ ಉರಿಯುವಂತೆ
“ಎಂತ ಚಳಿ..”
ಎಂದು ಕೈಗಳಿಂದ ಆ
ಸಣ್ಣ ಸಣ್ಣ ಗುಳ್ಳೆಗಳ
ಸವರಿಕೊಳ್ಳುತ್ತಾಳೆ
ನಗುವಿನಲ್ಲಿ ಬೇಜಾನು
ಸುಳ್ಳು ಹೇಳುವ
ಅವಳ ಅಳುವಿನಲ್ಲಿ
ಇನ್ನಿಲ್ಲದ
ಪ್ರಾಮಾಣಿಕತೆಯಿದೆ…
ಗುಟ್ಟು ಗುಟ್ಟಾಗಿಯೇ ಇರಲಿ
ನಮ್ಮಿಬ್ಬರ ಏಕಾಂತದ
ಒಂದು ದಿನ ನಾನು
ದೂರ ಕುಳಿತದ್ದಕ್ಕೆ ಅವಳು
ನನಗೆ ಕಾಣದ ಹಾಗೆ
ಅತ್ತಿದ್ದಳು…
ನನ್ನ ಯಾವುದೋ ಮಾತಿಗೆ
ಸುಮ್ಮನೇ ನಕ್ಕಿದ್ದಳು
-ಚಲಂ ಹಾಡ್ಲಹಳ್ಳಿ, ಹಾಸನ. —–