1.ವಾಸ್ತವಕಲೆ
ಸಿನಿಮಾದಲ್ಲಿ-
ಅನ್ಯಾಯ, ಅತ್ಯಾಚಾರ
ಭ್ರಷ್ಟಾಚಾರ,
ಸುಲಿಗೆ, ರಕ್ತಪಾತ
ಬಂಧನ, ವಿಚಾರಣೆ-
ಎಲ್ಲವೂ ಕಲೆ;
ವಾಸ್ತವದಲ್ಲೆಲ್ಲಿ
ಅಂಕದ
ಪರದೆ?
ಕೊನೆಗೆ
ಗತಿ, ಕೈಕೊಳ-
ಕಂಬಿಗಳ ಜೇಲೆ.
2.ರಕ್ಷಾಕವಚ
ವೀರ-
ವಿದ್ವಾಂಸರಿಗಿಂತ,
ವಿದೂಷಕರೇ
ಹತ್ತಿರ
ಆಳುವ
ಅರಸರುಗಳಿಗೆ;
ಆರೈಕೆ-ಪೂರೈಕೆ,
ಹರಕೆ-ಹಾರೈಕೆ
ಭಯರಾಹಿತ್ಯಕ್ಕೆ,
ಭಂಡರೇ
ಬಂಡವಾಳ,
ದೊರೆಗಳಿಗೆ
3.ಬಿಂದುಸಿಂಧು
ಬಿಂದು
ಸಣ್ಣದೆಂದು
ಕುಂದನೆಣಿಸಲಾದೀತೆ?,
ಬಿಂದು ಬಿಂದು
ಕೂಡಿಯೇ
ಸಿಂಧು;
ಸಣ್ಣ ಸಣ್ಣದು
ಸೇರಿಯೇ
ಬೃಹತ್ತಾಗುವ
ಬಂಧ,
ಮಾದರಿ
ನಮಗೆಂದೂ.
-ಡಾ. ಬಸವರಾಜ ಸಾದರ, ಬೆಂಗಳೂರು
——-