ಅನುದಿನ ಕವನ- ೧೨೬೮, ಹಿರಿಯ ಕವಿ: ಸತ್ಯಾನಂದ ಪಾತ್ರೋಟ, ಬಾಗಲಕೋಟೆ, ಕವನದ ಶೀರ್ಷಿಕೆ: ಮಗಳು

ಮಗಳು

ಮಗಳೆಂದರೆ
ಇವಳು ಮಗಳು
ಯಾರಿಗೂ ಆಗಿಲ್ಲ
ಮಗ್ಗಲ ಮುಳ್ಳು

ಇವಳು
ಬೆಳ್ಳಂ ಬೆಳಗಿನ
ಹೂಗನಸಿನ ಎಸಳು
ಮಲ್ಲಿಗೆಯ ಮೊಗ್ಗು

ಹುಟ್ಟಿದಳು, ಬೆಳೆದಳು
ಬೆಳೆದು, ಬೆಳೆಯುತ್ತ
ಅವರಿವರಿಗೆ ನೆರಳಾದಳು
ನೆರೆ, ಹೊರೆಯವರಿಗೆ
ಕಣ್ಣಾದಳು, ಕಿವಿಯಾದಳು

ತನ್ನ ಮನೆಗೆ
ತಾನೇ ಕಾವಲಾದಳು
ತನಗೇ ತಾನೇ ಅರ್ಥವಾಗದ
ಸದಾ ಜೀವನ್ಮುಖಿಯಾಗಿ
ಬೆಳಗಿನ ಚುಕ್ಕೆಯಾದಳು
ಅವರಿವರಿಗೆ ಕನಸಾದಳು

ಅವಳದು ಎಷ್ಟೊಂದು ಅವತಾರ
ಬೆಳೆದರೂ ಬೆಳೆಯುತ್ತಲೇ ಇದ್ದಾಳೆ
ಬಿಸಿಲು, ಮಳೆ, ಗಾಳಿ, ಚಳಿ
ಬೆಳಕು ಬೆಳದಿಂಗಳಿನಲಿ
ಅಲ್ಲೆಲ್ಲ
ಅವಳದ್ದೇ ಬಿಂಬ
ಕೈ ಅಳತೆಗೆ ಸಿಗದ ಚುಕ್ಕೆ ಚಂದಿರ

ಅದಕ್ಕೆ ಅವಳು ಮಗಳು
ಹೂಗನಸಿನ ಎಸಳು
ಬೆಳೆಯುತ್ತಲೇ ಇರಲಿ ಅವಳು

-ಸತ್ಯಾನಂದ ಪಾತ್ರೋಟ, ಬಾಗಲಕೋಟೆ